ಬಿಜೆಪಿಯೊಳಗಿನ ಅತೃಪ್ತರ ಗುಂಪು ಶೋಭಾ ವಿರುದ್ಧ ಕೆಲಸ ಮಾಡಿದೆ: ಪ್ರಮೋದ್ ಮಧ್ವರಾಜ್

Update: 2019-05-18 15:00 GMT

ಚಿಕ್ಕಮಗಳೂರು, ಮೇ 18: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ಆಡಳಿತಲ್ಲಿನ ಜನವಿರೋಧಿ ನೀತಿಗಳಿಂದಾಗಿ ಸಾಮನ್ಯ ಜನರು ತೀವ್ರ ತೊಂದರೆ, ನೋವುಗಳನ್ನು ಅನುಭವಿಸಿದ್ದಾರೆ. ಇಂತಹ ಜನರ ನೋವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಂಡರ್ ಕರೆಂಟ್ ವೇಮ್ ರೂಪದಲ್ಲಿ ಮೋದಿ ಅಲೆ ವಿರುದ್ಧ ಕೆಲಸ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರದ ಮೋದಿ ಸರಕಾರ ಜನವಿರೋಧಿ ನೀತಿಗಳನ್ನು ಜಾರಿ ಮಾಡಿದೆ. ನೋಟುಗಳ ಅಮಾನ್ಯೀಕರಣ, ಜಿಎಸ್‍ಟಿ ಸೇರಿದಂತೆ ಪೆಟ್ರೋಲ್ ಡೀಸೆಲ್ ಬೆಲೆಗಳ ಹೆಚ್ಚಳ, ದಲಿತರು, ಅಲ್ಪಸಂಖ್ಯಾತರ ಮೇಲಿನ ದಾಳಿ ಸೇರಿದಂತೆ ಬಿಜೆಪಿ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದರ ವಿರುದ್ಧ ದೇಶಾದ್ಯಂತ ಆಕ್ರೋಶ, ಅಸಮಾದಾನ ವ್ಯಕ್ತವಾಗಿದೆ. ಕೇಂದ್ರ ಸರಕಾರದ ನೀತಿಗಳಿಂದಾಗಿ ಸಾಕಷ್ಟು ಜನರು ಸಮಸ್ಯೆಗೆ ಸಿಲುಕಿ ನೊಂದಿದ್ದು, ಇದು ಕಳೆದ ಲೋಕಸಭೆ ಚುನಾವಣೆಯಲ್ಲಿ ಅಂಡರ್ ಕರೆಂಟ್ ಅಲೆಯ ರೂಪದಲ್ಲಿ ದೇಶಾದ್ಯಂತ ಇದ್ದ ಮೋದಿ ಅಲೆಯ ವಿರುದ್ಧ ಕಾರ್ಯನಿರ್ವಹಿಸಿದೆ. ಕಳೆದ ಲೋಕಸಭೆ ಚುನಾವಣೆ ಮೋದಿ ಅಲೆ ವರ್ಸಸ್ ಅಂಡರ್ ಕರೆಂಟ್ ಅಲೆಯ ಚುನಾವಣೆಯಾಗಿತ್ತು ಎಂದು ಪ್ರಮೋದ್ ಮಧ್ವರಾಜ್ ಅಭಿಪ್ರಾಯಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಮೋದಿ ಅಲೆಯೊಂದಿಗೆ ಶೋಭಾ ಕರಂದ್ಲಾಜೆ ವಿರೋಧಿ ಅಲೆಯೂ ಜೋರಾಗಿತ್ತು. ಅಲ್ಲದೇ ಬಿಜೆಪಿಯೊಳಗಿನ ಅತೃಪ್ತರ ಗುಂಪು ಶೋಭಾ ವಿರುದ್ಧ ಕೆಲಸ ಮಾಡಿದೆ. ಇದು ತನ್ನ ಪರವಾಗಿ ಮತಗಳಾಗಿ ಪರಿವರ್ತನೆಯಾಗಿವೆ ಎಂದ ಅವರು, ಚುನಾವಣೆ ವೇಳೆ ಕಾಂಗ್ರೆಸ್, ಜೆಡಿಎಸ್, ಸಿಪಿಐ ಪಕ್ಷಗಳ ನಡುವೆ ಭಿನ್ನಮತ ಇರಲಿಲ್ಲ. ಮೂರು ಪಕ್ಷಗಳು ಚುನಾವಣೆಯಲ್ಲಿ ತನ್ನ ಪರವಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿಯ ದಿನೇಶ್‍ಗುಂಡೂರಾವ್ ಸೇರಿದಂತೆ ಕಾಂಗ್ರೆಸ್‍ನ ಮಾಜಿ ಮಂತ್ರಿಗಳು, ಮಾಜಿ, ಹಾಲಿ ಶಾಸಕರು ನಡೆಸಿದ ಚುನಾವಣಾ ಪ್ರಚಾರ ಮತದಾರರ ಮೇಲೆ ಪರಿಣಾಮ ಬೀರಿದ್ದು, ಕ್ಷೇತ್ರದ ಜನರು ಹೊಸ ಮುಖದ ನಿರೀಕ್ಷೆಯಲ್ಲಿದ್ದರಿಂದ ಮೇ 23ರಂದು ತನ್ನ ಪರವಾಗಿ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣೆಯನ್ನು ಎರಡೂ ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಡೆಸಿದ್ದು, ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಿವೆ. ಈ ಕಾರಣದಿಂದಾಗಿ ಹೆಚ್ಚು ಮತದಾರರು ಮತಚಲಾಯಿಸುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮೈತ್ರಿ ಪಕ್ಷಗಳ ಅಭ್ಯರ್ಥಿ ಪರವಾಗಿ ಜಿಲ್ಲೆಯಲ್ಲಿ ಮೂರು ಪಕ್ಷಗಳು ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಿದ್ದಾರೆ. ಸಮನ್ವಯ ಸಮಿತಿ ಅತ್ಯಂತ ಯಶಸ್ವಿಯಾಗಿ ಪ್ರಚಾರ ಕಾರ್ಯಕೈಗೊಂಡಿತ್ತು ಎಂದು ಪ್ರಮೋದ್ ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡ ರೇಣುಕಾರಾಧ್ಯ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಕುಮಾರ್, ಮುಖಂಡ ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೂರು ಪಕ್ಷಗಳ ಮುಖಂಡರ ನಡುವೆ ಭಿನ್ನಾಭಿಪ್ರಾಯವಿತ್ತು. ಈ ಕಾರಣಕ್ಕೆ ಮೈತ್ರಿ ಅಭ್ಯರ್ಥಿ ಪರವಾಗಿ ಮುಖಂಡರು ಸಮರ್ಪಕವಾಗಿ ಪ್ರಚಾರ ನಡೆಸಿಲ್ಲ. ಕಾಂಗ್ರೆಸ್‍ನ ಮತದಾರರಿರುವ ಮನೆಗಳಿಗೂ ಮೈತ್ರಿ ಅಭ್ಯರ್ಥಿ ಪರನಾದ ಕರಪತ್ರಗಳನ್ನೂ ತಲುಪಿಸಿಲ್ಲ ಎಂಬ ದೂರುಗಳಿವೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಪ್ರಮೋದ್ ಮಧ್ವರಾಜ್, ಮುಖಂಡರು, ಕಾರ್ಯಕರ್ತರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಈ ಚುನಾವಣೆಗಳಲ್ಲಿ ಕಾರ್ಯಕರ್ತರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಾರೆ. ಆದರೆ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿ ದೊಡ್ಡದಿರುತ್ತದೆ. ಈ ಕಾರಣಕ್ಕೆ ಕಾರ್ಯಕರ್ತರಲ್ಲಿ ಆಸಕ್ತಿಯೂ ಕಡಿಮೆ ಇರುತ್ತದೆ. ಉಡುಪಿ-ಲೋಕಸಭೆ ಕ್ಷೇತ್ರ ಭೌಗೋಳಿಕವಾಗಿ ವಿಶಾಲವಾಗಿದೆ. ಈ ಕಾರಣಕ್ಕೆ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಸಮನ್ವಯದ ಕೊರತೆಯಿಂದಾಗಿ ಪ್ರಚಾರ ಕಾರ್ಯ ಸಮರ್ಪಕವಾಗಿ ನಡೆಯದೇ ಇರಬಹುದು ಎಂದು ಪ್ರಮೋದ್ ಸಮರ್ಥನೆ ನೀಡಿದರು.

ಲೋಕಸಭೆ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿದ್ದು, ಮೈತ್ರಿ ಅಭ್ಯರ್ಥಿ ಗೆಲುವು ಖಚಿತವಾಗಿದೆ. ಚುನಾವಣೆ ವೇಳೆ ಕಡೂರು ಜಿಪಂ ಕ್ಷೇತ್ರದ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮಹೇಶ್ ಒಡೆಯರ್ ಪಕ್ಷ ವಿರೋಧಿ ನಡೆಸಿದ್ದಾರೆ. ಮಹೇಶ್ ಸೆರಿದಂತೆ ಇನ್ನೂ ಕೆಲ ಮುಖಂಡರ ವಿರುದ್ಧ ಕೆಪಿಸಿಸಿ ಶಿಸ್ತುಕ್ರಮ ಸಮಿತಿಗೆ ದೂರು ನೀಡಲಾಗಿದೆ. ಈ ಸಂಬಂಧ ಸಮಿತಿ ಅಗತ್ಯ ಶಿಸ್ತುಕ್ರಮ ಕೈಗೊಳ್ಳಲಿದೆ.
- ಡಾ.ಡಿ.ಎಲ್.ವಿಜಯ್‍ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News