ರಾಷ್ಟ್ರಪಿತನನ್ನು ಅವಮಾನಿಸಿದವರನ್ನು ಜೈಲಿಗಟ್ಟಬೇಕು: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

Update: 2019-05-18 15:04 GMT

ಚಿಕ್ಕಮಗಳೂರು, ಮೇ 18: ಬ್ರಿಟಿಷರ ವಿರುದ್ಧ ಅಹಿಂಸಾತ್ಮಕವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರನ್ನು ಇಡೀ ವಿಶ್ವವೇ ಜಗತ್ತಿನ ಸರ್ವಶ್ರೇಷ್ಟ ನಾಯಕ, ಮಾನವತಾವಾದಿ ಎಂದು ಒಪ್ಪಿಕೊಂಡಿದೆ. ಆದರೆ ಅಂತನ ಮಾಹಾನ್ ವ್ಯಕ್ತಿಯ ವಿರುದ್ಧ ಬಿಜೆಪಿ ಸಂಸದರು, ನಾಯಕರು ಅವಹೇಳನಕಾರಿಯಾಗಿ ಮಾತನಾಡುತ್ತಾ ಅವಮಾನಿಸುತ್ತಿದ್ದಾರೆ. ಬಿಜೆಪಿಯ ಇಂತಹ ಸಂಸದರು, ನಾಯಕರ ವಿರುದ್ಧ ಕಾನೂನು ಕ್ರಮಕೈಗೊಂಡು ಜೈಲಿಗಟ್ಟಬೇಕೆಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಭಾರತ ಮಾತ್ರವಲ್ಲಿ ಇಡೀ ವಿಶ್ವವೇ ಗೌರವಿಸುತ್ತಿದೆ. ಜಗತ್ತಿನ ಎಲ್ಲ ಎಲ್ಲ ದೇಶಗಳಲ್ಲೂ ಮಹಾತ್ಮ ಗಾಂಧೀಜಿ ಅವರ ಮೂರ್ತಿ, ವೃತ್ತಗಳಿವೆ. ಗಾಂಧೀಜಿ ಹೆಸರಿನಲ್ಲಿ ದೇಶದ ಜನರು ಭಾವನಾತ್ಮಕ ಸಂಬಮಧ ಹೊಂದಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಅವರನ್ನು ಇಂದಿಗೂ ಪೂಜಿಸುವ ಆರಾಧಿಸುವ ಅಭಿಮಾನಿಗಳು, ಅನುಯಾಯಿಗಳಿದ್ದಾರೆ. ಇಂತಹ ರಾಷ್ಟ್ರಪಿತನ ಹತ್ಯೆಗೈದ ದೇಶದ್ರೋಹಿ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾಸಿಂಗ್ ದೇಶಭಕ್ತ ಎನ್ನುವ ಮೂಲಕ ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಗಾಂಧೀಜಿ ಅನುಯಾಯಿಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆಂದು ಪ್ರಮೋದ್ ಆರೋಪಿಸಿದರು.

ಪ್ರಜ್ಞಾಸಿಂಗ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಸಂಸದ ನಳೀನ್ ಕುಮಾರ್, ಅನಂತ್‍ಕುಮಾರ್ ಹೆಗಡೆ ಅವರೂ ರಾಷ್ಟ್ರಪಿತನಿಗೆ ಅಗೌರವ ತೋರಿದ್ದಾರೆಂದು ದೂರಿದ ಅವರು, ಬಿಜೆಪಿಯ ನಳೀನ್‍ ಕುಮಾರ್, ಅನಂತ್‍ ಕುಮಾರ್ ಹೆಗ್ಡೆ, ಪ್ರತಾಪ್‍ ಸಿಂಹನಂತವರು ಆಗಾಗ್ಗೆ ದೇಶದ ಜನರ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುತ್ತಾ ಸಂವಿಧಾನ ವಿರೋಧಿ ಕೃತ್ಯ ಎಸಗುತ್ತಿದ್ದಾರೆ. ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಈ ಸಂಸದ ಜನವಿರೋಧಿ ನಡವಳಿಕೆಗಳು, ಹೇಳಿಕೆಗಳ ವಿರುದ್ಧ ಯಾವುದೆ ಶಿಸ್ತುಕ್ರಮಕ್ಕೆ ಮುಂದಾಗುತ್ತಿಲ್ಲ. ಈ ಮೂಲಕ ಇಂತಹ ಕಿಡಿಗೇಡಿ ಸಂಸದರಿಗೆ ಪಕ್ಷದ ವರಿಷ್ಠರು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿ ವರಿಷ್ಠರಿಗೆ ನಿಜವಾಗಿಯೂ ರಾಷ್ಟ್ರಪಿತನ ಬಗ್ಗೆ ಗೌರವ ಇದ್ದಲ್ಲಿ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಪಕ್ಷದಿಂದ ಅವರನ್ನು ಉಚ್ಛಾಟಿಸಬೇಕೆಂದು ಪ್ರಮೋದ್ ಸವಾಲು ಹಾಕಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ್‍ಕುಮಾರ್ ಮಾತನಾಡಿ, ಬಿಜೆಪಿ ಸಂಸದರಾದ ನಳೀನ್ ಕುಮಾರ್, ಅನಂತ್‍ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಹಾಗೂ ಪ್ರಜ್ಞಾಸಿಂಗ್‍ನಂತವರೂ ಆಗಾಗ್ಗೆ ಮಾನಸಿಕ ಅಸ್ವಸ್ಥರಂತಾಡುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ, ಜನರು ದಂಗೆ ಏಳುವ ಮುನ್ನ ಇಂತಹ ಲಜ್ಜೆಗೆಟ್ಟ ಮಂದಿಯನ್ನು ಶೀಘ್ರ ಕಾರಾಗೃಹಕ್ಕೆ ಕಳಿಸುವ ಕೆಲಸವಾಗಬೇಕೆಂದರು.

ಧರಣಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಮೂರ್ತಿ, ಮಾಜಿ ಸಚಿವ ಸಗೀರ್ ಅಹ್ಮದ್, ಮಾಜಿ ಎಮ್ಮೆಲ್ಸಿ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಚೆ ರೇಖಾಹುಲಿಯಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಜಿಪಂ ಮಾಜಿ ಸದಸ್ಯ ಎ.ಎನ್.ಮಹೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ನಗರಸಭೆ ಸದಸ್ಯೆ ಸುರೇಖಾ ಸಂಪತ್, ನಗರಸಭೆ ಮಾಜಿ ಸದಸ್ಯ ಹಾಗೂ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News