ಹೊರಟ್ಟಿ ಹೇಳಿಕೆಯಿಂದ ಸರಕಾರಕ್ಕೆ ಯಾವ ತೊಂದರೆಯೂ ಇಲ್ಲ: ಶಾಸಕ ಟಿ.ಡಿ.ರಾಜೇಗೌಡ

Update: 2019-05-18 15:14 GMT

ಚಿಕ್ಕಮಗಳೂರು, ಮೇ 18: ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ಹೇಳಿಕೆ ನೀಡಿರುವ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿಯಂತಹ ನಾಯಕರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಹೊರಟ್ಟಿ ಹೇಳಿಕೆಯಿಂದಾಗಿ ಸಮ್ಮಿಶ್ರ ಸರಕಾರ ಉರುಳುವುದಿಲ್ಲ. ಸರಕಾರ ತನ್ನ ಐದು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಲಿದೆ ಎಂದು ಶೃಂಗೇರಿ ವಿಧಾನಸಭೆ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸುವ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರಕಾರವನ್ನು ವಿಸರ್ಜಿಸುವುದು ಬಿಡುವುದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಸಮ್ಮಿಶ್ರ ಸರಕಾರ ಸುಗಮವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಈ ಪಕ್ಷಗಳ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವರಿಷ್ಠರು ಸಮನ್ವಯ ಸಮಿತಿಯನ್ನು ರಚನೆ ಮಾಡಿದ್ದಾರೆ. ಸಮ್ಮಿಶ್ರ ಸರಕಾರದ ಆ ಸಮಿತಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆಯೇ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಷದ ಬೇರೆ ಯಾವ ನಾಯಕರೂ ಯಾವ ಹೇಳಿಕೆ ನೀಡಿದರೂ ಅದರಿಂದ ಸರಕಾರದ ಮೇಲೆ ಪರಿಣಾಮ ಬೀರದು ಎಂದ ಅವರು, ಇದರ ಮಧ್ಯೆ ಯಾರೇ ಆದರೂ ಮನಸ್ಸಿಗೆ ಬಂದ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಸಮ್ಮಿಶ್ರ ಸರಕಾರಕ್ಕೂ ಕ್ಷೇಮ, ಸರಕಾರ ಜನಪರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲಿ ಪ್ರಸಕ್ತ ಭೀಕರ ಬರಗಾಲ ಆವರಿಸಿದೆ. ಜೀವನದಿಗಳು, ಕೆರೆಕಟ್ಟೆಗಳು, ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಚುನಾವಣೆ ವೇಳೆ ರಾಜ್ಯದ ಜನರ ಸಮಸ್ಯೆ ಬಗೆಹರಿಸುವ ಮಾತು ಕೊಟ್ಟಿದ್ದೇವೆ. ಆದ್ದರಿಂದ ಸರಕಾರ ಬೀಳಿಸುವ ಹೇಳಿಕೆ ನೀಡುವುದನ್ನು ಬಿಟ್ಟು ರಾಜ್ಯದ ಜನರ ಸಮಸ್ಯೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ಮುಕಂಡರು, ಶಾಸಕರು ಗಮನಹರಿಸಬೇಕಿದೆ ಎಂದರು. 

ಬಸವರಾಜ ಹೊರಟ್ಟಿ ಹೇಳಿಕೆಯು ಜನರಲ್ಲಿ ಗೊಂದಲ ಮೂಡಿಸುತ್ತದೆ. ಬರ ಪರಿಸ್ಥಿತಿಯಲ್ಲಿ ಮತ್ತೆ ಚುನಾವಣೆ ನಡೆಯುತ್ತದೆಯೇ ಎಂಬ ಗೊಂದಲ ಜನರಲ್ಲಿ ಮೂಡುತ್ತದೆ. ಜನರಿಗೆ ಚುನಾವಣೆ ಬೇಕಿಲ್ಲ. ಸಮಸ್ಯೆ ಬಗೆಹರಿಯವುದು ಬೇಕಿದೆ ಎಂದರು.

ಬಸವರಾಜ ಹೊರಟ್ಟಿ ಅವರ ಹೇಳಿಕೆಯಿಂದಾಗಿ ನಾಳೆಯೇ ಸರಕಾರ ಉರುಳುವುದಿಲ್ಲ. ಸಮ್ಮಿಶ್ರ ಸರಕಾರಕ್ಕೆ ಯಾವ ತೊಂದರೆಯೂ ಇಲ್ಲ. ಸರಕಾರ ತನ್ನ ಅಧಿಕಾರವಧಿಯನ್ನು ಪೂರ್ಣಗೊಳಿಸುತ್ತದೆ ಎಂದ ಅವರು, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಈ ಸರಕಾರಕ್ಕೆ ಒಂದು ಶಕ್ತಿಯಾಗಿದ್ದಾರೆ. ಅವರಿಗೆ ಈ ಸರಕಾರದ ಮೇಲೆ ಅಪಾರ ದೃಢ ನಂಬಿಕೆ ಇದೆ. ಅವರಿಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಅರಿವಿದ್ದು, ಇಂತಹ ಪರಿಸ್ಥಿತಿಯಲ್ಲಿ ಅವರು ಚುನಾವಣೆ ನಡೆಯಲು ಬಿಡಲ್ಲ. ಮೈತ್ರಿ ಪಕ್ಷಗಳ ನಡುವೆ ಇರುವ ಎಲ್ಲ ರೀತಿಯ ಗೊಂದವನ್ನು ಅವರು ಸರಿಮಾಡುತ್ತಾರೆ. ತಪ್ಪು ಮಾಡುವ ಶಾಸಕರನ್ನು ತಿದ್ದಿ ಸರಿದಾರಿಯಲ್ಲಿ ನಡೆಸುವ ಸಾಮರ್ಥ್ಯವೂ ಅವರಿಗಿದೆ. ಅವರ ಮಾರ್ಗದರ್ಶನದಲ್ಲೇ ಎರಡೂ ಪಕ್ಷಗಳ ಶಾಸಕರು, ಸಚಿವರು ಸರಕಾರವನ್ನು ನಡೆಸುತ್ತಾರೆಂದರು ತಿಳಿಸಿದರು.

ಇದೇ ವಿಚಾರ ಸಂಬಂಧ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಮಾತಿಗೆಳೆದಾಗ, ಸಮ್ಮಿಶ್ರ ಸರಕಾರಕ್ಕೆ ನಾಂದಿ ಹಾಡಿದವರು ರಾಹುಲ್ ಗಾಂಧಿ ಹಾಗೂ ದೇವೇಗೌಡ. ಈ ಇಬ್ಬರು ವರಿಷ್ಠರ ಬಾಯಿಯಿಂದ ಯಾವುದೇ ಹೇಳಿಕೆ ಬಾರದ ಹೊರತು ತಾನು ಸಮ್ಮಿಶ್ರ ಸರಕಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಬಸವರಾಜ ನಹೊರಟ್ಟಿ ಹೇಳಿಕೆಯಿಂದ ಗೊಂದಲಕ್ಕೆ ಬೀಳುವವರು ಬೀಳುತ್ತಾರೆ. ನನ್ನಂತಹ ಗಟ್ಟಿಗರು ಯಾವ ಗೊಂದಲಕ್ಕೂ ಒಳಗಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News