ಮಂಡ್ಯ: ರೇಷ್ಮೆ ಬೆಳೆಗಾರರ ರಕ್ಷಣೆಗೆ ಆಗ್ರಹಿಸಿ ಧರಣಿ

Update: 2019-05-18 17:11 GMT

ಮಂಡ್ಯ, ಮೇ 18: ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿ ರೇಷ್ಮೆ ಬೆಳೆಗಾರರ ಒಕ್ಕೂಟದ ಸದಸ್ಯರು ಶನಿವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದರು.

ದಿನೇ ದಿನೇ ರೇಷ್ಮೆ ಗೂಡಿನ ದರ ಕುಸಿಯುತ್ತಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಡಿಕೆಗಿಂತ ಉತ್ಪಾದನೆ ಕಡಿಮೆಯಿದ್ದರೂ ದರ ಕುಸಿಯಲು ಸರಕಾರಗಳು, ಅಧಿಕಾರಿಗಳ ಬೇಜವಾಬ್ಧಾರಿತನ ಇದಕ್ಕೆ ಕಾರಣ ಎಂದು ಧರಣಿ ನಿರತರು ಕಿಡಿಕಾರಿದರು.

ರೇಷ್ಮೆ ಬೆಳೆ ಬೆಳೆಯಲು ವೆಚ್ಚ ಮಾಡಿದ ಹಣ ಮರಳಿ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ರೇಷ್ಮೆ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಿಲೋ ಗೂಡಿಗೆ 30 ರೂ. ಬೆಂಬಲ ಬೆಲೆ ನೀಡಲಾಗುತ್ತಿತ್ತು. 40 ರೂ. ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ಸರಕಾರಗಳು ಬರಬೇಕು. ಕೆಜಿ ಸಿಬಿ ರೇಷ್ಮೆ ಗೂಡಿಗೆ ಕನಿಷ್ಠ 350 ರೂ. ಹಾಗೂ ಸಿಎಸ್‍ಆರ್ ರೇಷ್ಮೆ ಗೂಡಿಗೆ 400 ರೂ. ನಿಗದಿ ಮಾಡಬೇಕು. ಬಸವರಾಜ ಸಮಿತಿ ಶಿಫಾರಸ್ಸಿನಂತೆ ರೇಷ್ಮೆ ಬೆಲೆ 300ಕ್ಕಿಂತ ಕಡಿಮೆಯಾದರೆ ಅದರ ನಷ್ಟವನ್ನು ಸರಕಾರವೇ ಭರಿಸಬೇಕು ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಜೋಗಿಗೌಡ, ಸಂಚಾಲಕ ಮಹದೇವು,  ಗುಡಿದೊಡ್ಡಿ ಶಿವಲಿಂಗಯ್ಯ, ಅಪ್ಪಾಜಪ್ಪ, ನಾಗಣ್ಣ, ರಾಮಚಂದ್ರು, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News