ಗೋಡ್ಸೆ ಬಗ್ಗೆ ಹೇಳಿಕೆ ವಿಚಾರ: ಬಿಜೆಪಿ ಮುಖಂಡರ ಗಡಿಪಾರಿಗೆ ಕಾಂಗ್ರೆಸ್ ಒತ್ತಾಯ

Update: 2019-05-18 17:25 GMT

ತುಮಕೂರು, ಮೇ 18: ಅಹಿಂಸಾವಾದಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳುತ್ತಿರುವ ಬಿಜೆಪಿಯ ಮುಖಂಡರನ್ನು ಗಡಿಪಾರು ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು, ಬಿಜೆಪಿ ಪಕ್ಷದ ನಳಿನ್ ಕುಮಾರ್ ಕಟೀಲ್, ಪ್ರಜ್ಞಾ ಸಿಂಗ್ ಹಾಗೂ ಅನಂತಕುಮಾರ್ ಹೆಗಡೆ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಒಪ್ಪಿಕೊಳ್ಳುವುದಾದರೆ ಅವರ ಪ್ರಕಾರ ಗಾಂಧೀಜಿ ಭಯೋತ್ಪಾದಕರೇ  ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕಿದೆ. ಇಡೀ ದೇಶವೇ ಮಹಾತ್ಮ ಎಂದು ಕರೆದಿರುವ ಗಾಂಧಿಯವರನ್ನು ಕೊಂದಿರುವ ವ್ಯಕ್ತಿಯನ್ನು ದೇಶಭಕ್ತ ಎಂದು ಹೇಗೆ ಒಪ್ಪಿಕೊಳ್ಳುತ್ತಾರೆ. ಮೋದಿ ಅಥವಾ ಅಮಿತ್ ಶಾ ಇವರನ್ನು ಗಡಿಪಾರು ಮಾಡದಿದ್ದರೆ ದೇಶಾದ್ಯಂತ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ ತುಮಕೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಟಿ.ಹೆಚ್.ಹನುಮಂತರಾಜು ಅವರನ್ನು ತುಮಕೂರು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ತು.ಬಿ.ಮಲ್ಲೇಶ್, ತರುಣೇಶ್, ಆಟೋರಾಜು, ಮೆಹಬೂಬ್‍ಪಾಷಾ, ರಾಜೇಶ್ ದೊಡ್ಮನೆ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News