ನಾಥೂರಾಮ್ ಗೋಡ್ಸೆ ಪರ ಹೇಳಿಕೆ: ಮೈಸೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-05-18 17:31 GMT

ಮೈಸೂರು,ಮೇ.18: ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡಿರುವ ಬಿಜೆಪಿಯ ಪ್ರಜ್ಞಾಸಿಂಗ್ ಠಾಕೂರ್, ಸಂಸದರಾದ ನಳೀನ್‍ ಕುಮಾರ್ ಕಟೀಲ್ ಮತ್ತು ಅನಂತಕುಮಾರ್ ಹೆಗ್ಗಡೆ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಮತ್ತು ನಗರ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ಪ್ರತಿಮೆ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಈ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಬಿಜೆಪಿಯ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರ ಮನಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ. ದೇಶದಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯವರಿಗೆ ಅಪಮಾನ ಮಾಡಿದ್ದಾರೆ. ಗಾಂಧಿ ಕೊಂದ ವ್ಯಕ್ತಿಯನ್ನು ದೇಶ ಭಕ್ತ ಎಂದು ಹೇಳುವ ಇವರು ಮುಂದೆ ಇನ್ಯಾವ ಮಟ್ಟಕ್ಕೆ ಇಳಿಯಬಹುದು ಎಂದು ಯೋಚಿಸಬೇಕಿದೆ ಎಂದರು.

ಬಿಜೆಪಿಯ ನಾಯಕರುಗಳು ಅತ್ಯಂತ ವ್ಯಭಿಚಾರಿಗಳು. ಅವರಲ್ಲಿನ ಅನೇಕ ನಾಯಕರುಗಳು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಒಂದು ಕಡೆ ದೇಶ ಭಕ್ತರ ರೀತಿ ನಟಿಸುವ ಅವರು ಮತ್ತೊಂದು ಕಡೆ ದೇಶವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮಾತಿನಲ್ಲಿ ಹಿಡಿತವಿಲ್ಲದೇ ಏನೇನೋ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳನ್ನು ಖಂಡಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಾದ ನಾಯಕರುಗಳೇ ಅವರ ಹೇಳಿಕೆಗಳಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಉದ್ಧಟತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್ ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ಯುವಮುಖಂಡರಾದ ಶಿವಪ್ರಸಾದ್, ಈಶ್ವರ್ ಚಿಕ್ಕಡಿ, ಮೈಸೂರು ಬಸವಣ್ಣ, ರವಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶೌಖತ್ ಅಲಿ ಖಾನ್, ಮಾಜಿ ಸಿಂಡಿಕೇಟ್ ಸದಸ್ಯ ಗೋಪಿನಾಥ್, ಸೋಮಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News