ಮೈಸೂರಿನಲ್ಲಿ ಶೂಟೌಟ್‍ ಪ್ರಕರಣ: ಕುಟುಂಬಸ್ಥರ ಸಮ್ಮುಖದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ

Update: 2019-05-18 17:39 GMT

ಮೈಸೂರು,ಮೇ.18: ಮೈಸೂರಿನ ಹೊರವಲಯದ ಹೆಬ್ಬಾಳ ರಿಂಗ್ ರಸ್ತೆಯಲ್ಲಿ ನಡೆದ ಶೂಟ್‍ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿ ಸುಕ್ವಿಂದರ್ ಸಿಂಗ್ ಮರಣೋತ್ತರ ಪರೀಕ್ಷೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಸಲಾಯಿತು.

ನಗರದ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಮಾಜಿಸ್ಟ್ರೇಟ್ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಯಿತು.

ಪಂಜಾಬ್ ನಿಂದ ನಿನ್ನೆ ರಾತ್ರಿ ಸುಕ್ವಿಂದರ್ ಕುಟುಂಬಸ್ಥರು ಆಗಮಿಸಿದ್ದರು. ಶನಿವಾರ ಬೆಳಿಗ್ಗೆ ಕುಟುಂಬಸ್ಥರ ಅನುಮತಿ ಪಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಈ ವೇಳೆ ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತ ದೇಹವನ್ನು ಆಂಬುಲೆನ್ಸ್ ಮುಖಾಂತರ ಬೆಂಗಳೂರಿಗೆ ರವಾನಿಸಲಾಯಿತು. ನಂತರ ಅಲ್ಲಿಂದ ಪಂಜಾಬ್ ಗೆ ವಿಮಾನದಲ್ಲಿ ಕೊಂಡ್ಯಲಾಗುವುದು ಎಂದು ತಿಳಿದು ಬಂದಿದೆ.

ಸುಕ್ವಿಂದರ್ ಸಾವಿನ ಸುತ್ತ ಅನುಮಾನದ ಹುತ್ತ: ಶೂಟೌಟ್‍ಗೆ ಒಳಗಾದ ಸುಕ್ವಿಂದರ್ ಸಿಂಗ್ ಹಣ ದುಪ್ಪಟ್ಟು ಮಾಡುವ ದಂಧೆಗೆ ಸೇರಿದ ವ್ಯಕ್ತಿಯಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮುಂಬೈನಲ್ಲಿ ಫೈನಾನ್ಸ್ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ.

ಮೈಸೂರಿನ ಬಾತ್ಮೀದಾರನೊಬ್ಬನಿಗೆ ಫೈನಾನ್ಸ್ ನೀಡಲಾಗಿತ್ತು. ಆದರೆ ಆತ ಸರಿಯಾಗಿ ಹಣ ನೀಡದೆ ಇರುವುದರಿಂದ ಆತ ಹಣ ವಸೂಲಿಗಾಗಿ ಮೈಸೂರಿಗೆ ಬಂದಿದ್ದ ಎನ್ನಲಾಗಿದೆ. ಹಣ ದುಪ್ಪಟ್ಟು ಮಾಡುವ ದಂಧೆಕೋರರ ಜೊತೆಗೆ ಈತನನ್ನು ಬಾತ್ಮೀದಾರ ಸೇರಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ ಶೂಟೌಟ್ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News