ಬರ ನಿರ್ವಹಣೆ ವೇಳೆ ಸಾರ್ವಜನಿಕರಿಂದ ದೂರು ಬಾರದಂತೆ ಎಚ್ಚರ ವಹಿಸಿ: ರಾಜೀವ್ ಚಾವ್ಲಾ

Update: 2019-05-18 17:58 GMT

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ 

 ಬರ ಪರಿಸ್ಥಿತಿ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಸೂಚನೆ

ಚಿಕ್ಕಮಗಳೂರು, ಮೇ 18: ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಮೇಲ್ವಿಚಾರಣೆಯನ್ನು ವ್ಯವಸ್ಥಿತವಾಗಿ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಕಡೂರು ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ಜನ ಸಾಮಾನ್ಯರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬೇಕು ಎಂದರು.

ಚಿಕ್ಕಮಗಳೂರು ತಾಲೂಕಿನ 36 ಗ್ರಾಮ, ಕಡೂರು ತಾಲೂಕಿನ 50 ಗ್ರಾಮ ಹಾಗೂ ತರೀಕೆರೆ ತಾಲೂಕಿನ ಒಂದು ಗ್ರಾಮ ಸೇರಿದಂತೆ 87 ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇವು ವ್ಯವಸ್ಥಿತವಾಗಿ ನಡೆಯುತ್ತಿರುವುದರ ಬಗ್ಗೆನಿಗಾವಹಿಸಬೇಕು ಎಂದ ಅವರು, ಜಿ.ಪಿ.ಎಸ್ ಅಳವಡಿಸಿರುವ ವಾಹನ ಟ್ಯಾಂಕರ್ ಗಳ ಯಾವುದೇ ಲೋಪದೋಷವಾಗುತ್ತಿಲ್ಲ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪ್ರತಿದಿನ ಆಗಿಂದ್ದಾಗೆ ನೀರು ಸರಬರಾಜು ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಟ್ಯಾಂಕರ್ ಗಳ ಮಾಲಕರಿಗೆ 15 ದಿನಗಳೊಳಗಾಗಿ ಹಣ ಪಾವತಿ ಮಾಡಬೇಕೆಂದು ಸೂಚಿಸಿದರು.

ಪೂರ್ವ ಮುಂಗಾರು ಮಳೆಗೆ 11,000ಕ್ಕೂ ಹೆಚ್ಚು ಜಮೀನಿನಲ್ಲಿ ಬಿತ್ತನೆ ಕಾರ್ಯಗಳಾಗಬೇಕಿತ್ತು. ಮಳೆ ಕೊರತೆಯಿಂದಾಗಿ 807 ಎಕರೆ ಮಾತ್ರ ಬಿತ್ತನೆಯಾಗಿದೆ. ಈ ಬೆಳೆಗಳಿಗೆ ತಪ್ಪದೇ ವಿಮಾ ಯೋಜನೆಯನ್ನು ಮಾಡಿಸುವ ಕಾರ್ಯವನ್ನು ಕೃಷಿ ಇಲಾಖೆ ಅಧಿಕಾರಿಗಳು ತಪ್ಪದೇ ಈ ತಿಂಗಳ ಕೊನೆಯ ಒಳಗೆ ಕ್ರಮ ಕೈಗೊಳ್ಳಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದ ಅವರು, ಮುಂಬರುವ ಮುಂಗಾರಿನಲ್ಲಿ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ರಸ ಗೊಬ್ಬರಗಳ ದಾಸ್ತಾನು ಮಾಡಿಕೊಳ್ಳುವುದರೊಂದಿಗೆ ವ್ಯವಸ್ಥಿತವಾಗಿ ಸರಬರಾಜು ಮಾಡಲು ಮುಂದಾಗಬೇಕು. ಜಾನುವಾರುಗಳಿಗೆ ಸೆಪ್ಟೆಂಬರ್ ತಿಂಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಕೆಲವೊಮ್ಮೆ ಕೊರತೆಯಾಗುವ ಗ್ರಾಮಗಳಿಗೆ ಪಕ್ಕದ ತಾಲೂಕುಗಳಿಂದ ತರಿಸಿಕೊಳ್ಳಬೇಕೆಂದು ಪಶು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.

ಕಳೆದ ಸಾಲಿನಲ್ಲಿ ಬೆಳೆ ಹಾನಿ ಉಂಟಾದ ಜಮೀನುಗಳ ರೈತರಿಗೆ 3.48 ಕೋಟಿ ಪರಿಹಾರದ ಹಣವನ್ನು 38 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪರಿಹಾರ ಧನವನ್ನು ನೀಡಲಾಗಿದೆ. ಬಾಕಿ ಉಳಿದ 12 ಸಾವಿರ ರೈತರಿಗೆ ಪರಿಹಾರದ ಹಣವನ್ನು ನೀಡಲು ಬ್ಯಾಂಕ್ ಖಾತೆ ಮತ್ತು ಮತ್ತಿತರ ದಾಖಲೆಗಳನ್ನು ಪಡೆಯುವುದರೊಂದಿಗೆ ಶೀಘ್ರದಲ್ಲಿಯೇ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಲು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಟೋಲ್ ಫ್ರೀ ದೂರವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲವೆಂಬುವುದರ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆ ಕುರಿತ ಸಭೆಯು ಪ್ರತೀ ವಾರ ನಡೆಯಬೇಕೆಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಜಿಲ್ಲೆಯ ಬರ ನಿರ್ವಹಣೆ ಕುರಿತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿ.ಪಂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ನಂತರ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರುವನಹಳ್ಳಿಯಲ್ಲಿ ಎನ್.ಆರ್.ಐ.ಜಿ ಕಾಮಗಾರಿಯನ್ನು ಚೀಲನಹಳ್ಳಿಯಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಹಾಗೂ ಹಂದೇನಹಳ್ಳಿಯಲ್ಲಿ ಚೆಕ್‍ ಡ್ಯಾಂ ಕಾಮಗಾರಿಯನ್ನುಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News