ನಾಥೂರಾಮ್ ಗೋಡ್ಸೆ ಪರ ಹೇಳಿಕೆಗೆ ಖಂಡನೆ: ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2019-05-18 18:09 GMT

ಮಡಿಕೇರಿ ಮೇ 18 : ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಯನ್ನು ದೇಶಭಕ್ತ ಎಂದು ಕರೆದ ಬಿಜೆಪಿ ನಾಯಕಿ ಸಾದ್ವಿ ಪ್ರಜ್ಞಾಸಿಂಗ್ ಮತ್ತು ಇವರ ಹೇಳಿಕೆಯನ್ನು ಬೆಂಬಲಿಸಿದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ಕಾಂಗ್ರೆಸ್ ಪ್ರಮುಖರು ಬಿಜೆಪಿಯ ಮೂವರು ನಾಯಕರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಮಾನತೆ ಮತ್ತು ಸಂವಿಧಾನದ ಆಶಯದಂತೆ ಬದುಕಬೇಕಾಗಿದೆ. ಆದರೆ ಬಿಜೆಪಿಯ ಕೆಲವು ನಾಯಕರು ಗಾಂಧೀಜಿಯನ್ನು ಗುಂಡಿಕ್ಕಿ ಕೊಲೆಗೈದ ಗೋಡ್ಸೆಯನ್ನು ವೈಭವೀಕರಣ ಮಾಡುವ ಮೂಲಕ ವಿಚಿತ್ರ ಹೇಳಿಕೆ ಸೃಷ್ಟಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಸಮಾಜಘಾತುಕ ಹೇಳಿಕೆಯ ಮೂಲಕ ಅಶಾಂತಿ ಮೂಡಿಸಿ ಒಡಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳುವ ಮೂಲಕ ಗಾಂಧೀಜಿಯನ್ನು ಕೊಂದಿರುವುದು ಸರಿ ಎಂದು ಪ್ರತಿಬಿಂಬಿಸುತ್ತಿರುವುದು ರಾಷ್ಟ್ರದ್ರೋಹದ ಕೆಲಸವಾಗಿದೆ. ಬಿಜೆಪಿಗೆ ಮೌಲ್ಯಗಳು ಇದ್ದರೆ ಇಂಥ ರಾಷ್ಟ್ರದ್ರೋಹ ಹೇಳಿಕೆ ನೀಡಿರುವ ಮೂವರನ್ನು ಪಕ್ಷದಿಂದ ಉಚ್ಛಾಟಣೆ ಮಾಡಬೇಕು ಮತ್ತು ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಸದಸ್ಯ ಟಿ.ಪಿ.ರಮೇಶ್, ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ, ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್, ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಇ.ಮ್ಯಾಥ್ಯು, ಮಹಿಳಾ ನಗರಾಧ್ಯಕ್ಷರಾದ ಪಾರ್ವತಿ ಫ್ಯಾನ್ಸಿ, ಪ್ರಧಾನ ಕಾರ್ಯದರ್ಶಿ ಮಿನಾಝ್ ಪ್ರವೀಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News