ಕೃಷ್ಣಾ ನದಿಗೆ ನೀರು ಬಿಡುಲು ಮಹಾರಾಷ್ಟ್ರ ಹಿಂದೇಟು: ಜಲಸಂಪನ್ಮೂಲ ಸಚಿವ ಡಿಕೆಶಿ ಅಸಮಾಧಾನ

Update: 2019-05-19 15:14 GMT

ಬೆಂಗಳೂರು, ಮೇ 19: ಉತ್ತರ ಕರ್ನಾಟಕದ ಬಹುಭಾಗದ ಜನ ಕೃಷ್ಣಾ ನದಿಗೆ ಆಶ್ರಯಿಸಿದ್ದು, ಮಹಾರಾಷ್ಟ್ರದಿಂದ ಬರುವ ನೀರಿಗೆ ಎದುರು ನೋಡುತ್ತಿದ್ದಾರೆ. ಆದರೆ, ಮಹಾರಾಷ್ಟ್ರ ಸರಕಾರ ಕೊಟ್ಟ ಮಾತಿನಂತೆ ನೀರು ಬಿಡುಗಡೆ ಮಾಡಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಹಿಂದೆ ನಮ್ಮ ಸರಕಾರದ ಮನವಿ ಮೇರೆಗೆ ಮಹಾರಾಷ್ಟ್ರ ಸರಕಾರ ನೀರು ಬಿಡುವುದಾಗಿ ಒಪ್ಪಿಕೊಂಡಿತ್ತು. ಆದರೆ, ಈಗ ಅವರು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ. ಕೃಷ್ಣಾ ನದಿಗೆ ಅವರು ನೀರನ್ನು ಹರಿಸಿಲ್ಲ. ಅದರಲ್ಲೂ ಕುಡಿಯುವ ನೀರಿನ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರ ಅನಿರೀಕ್ಷಿತ ಮತ್ತು ಅಶ್ಚರ್ಯಕರವಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರಕಾರ ‘ನೀರಿಗೆ ನೀರು’ ಒಪ್ಪಂದಕ್ಕೂ ಒಪ್ಪಿಕೊಂಡಿತ್ತು. ಆದರೆ, ಅವರು ಅದನ್ನು ಗೌರವಿಸಲಿಲ್ಲ. ಇದು ತುರ್ತು ಸಂದರ್ಭವಾಗಿದೆ. ನೀರನ್ನು ಬಿಡುವುದರಿಂದ ರೈತರ ಮತ್ತು ಜನರಿಗೆ ಅನುಕೂಲವಾಗಲಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಕಾಗವಾಡ ಮತ್ತು ಅಥಣಿ ಭಾಗದ ಜನರಿಗೆ ಬಹಳ ಉಪಯೋಗವಾಗಲಿದೆ. ನಾವು ನಮ್ಮ ಇಡಕಲ್ ಅಣೆಕಟ್ಟೆಯಿಂದ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News