ಕಾಂಗ್ರೆಸ್ ಮುಖಂಡನಿಂದ ಹಣ ಹಂಚಿಕೆ ಆರೋಪ: ಪೊಲೀಸ್ ಜೀಪ್ ಎದುರು ಉಮೇಶ್ ಜಾಧವ್ ಧರಣಿ

Update: 2019-05-19 15:16 GMT
ಉಮೇಶ್ ಜಾಧವ್

ಕಲಬುರಗಿ, ಮೇ 19: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನವಾದ ಇಂದು ಕಾಂಗ್ರೆಸ್ ಮುಖಂಡರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಡಾ.ಉಮೇಶ್ ಜಾಧವ್ ಪೊಲೀಸರ ಜೀಪಿನ ಎದುರು ಕೂತು ಪ್ರತಿಭಟನೆ ನಡೆಸಿದರು.

ಚಿಂಚೋಳಿ ಕ್ಷೇತ್ರದ ಖಾನಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ, ಚಿತ್ತಾಪುರ ತಾಲೂಕು ಪಂಚಾಯತ್ ಸದಸ್ಯ ನಾಮದೇವ ರಾಠೋಡ್ ಸೇರಿದಂತೆ ನಾಲ್ವರು ನಾಯಕರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉಮೇಶ್ ಜಾಧವ್, ಪೊಲೀಸರ ಜೀಪಿನ ಎದುರು ಧರಣಿ ಕೂತು, ನಾಮದೇವ ರಾಠೋಡ್, ಸಚಿವ ಪ್ರಿಯಾಂಕ್ ಖರ್ಗೆಯ ಬಲಗೈ ಬಂಟ. ಸಚಿವರ ಕುಮ್ಮಕ್ಕಿನಿಂದಲೇ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಉಂಟಾಗಿದ್ದರಿಂದ, ಪೊಲೀಸರು ತಾಲೂಕು ಪಂಚಾಯತ್ ಸದಸ್ಯ ನಾಮದೇವ್ ರಾಠೋಡ್‌ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News