ಬೆದರಿಸುವ ಉದ್ದೇಶಕ್ಕೆ ಹೊರಟ್ಟಿ ಹೇಳಿಕೆ: ಸಚಿವ ಶಿವಾನಂದ ಪಾಟೀಲ್

Update: 2019-05-19 15:18 GMT

ಬಾಗಲಕೋಟೆ, ಮೇ 19: ‘ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕೇವಲ ಬೆದರಿಸುವ ಉದ್ದೇಶಕ್ಕೆ ಮೈತ್ರಿ ಸರಕಾರ ವಿಸರ್ಜನೆ ಒಳಿತು ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಸರಕಾರ ಬೀಳಿಸುವ ಉದ್ದೇಶವಿಲ್ಲ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೊರಟ್ಟಿ ಅವರಿಗೆ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸುವ ಉದ್ದೇಶಿದಿಂದ ಸರಕಾರ ವಿಸರ್ಜನೆ ಒಳಿತು ಎಂಬ ಹೇಳಿಕೆ ನೀಡಿಲ್ಲ ಎಂದು ಸಮರ್ಥನೆ ಮಾಡಿದರು.

ಪರಿಹಾರ: ವಿಜಯಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ 1ಲಕ್ಷ ರೂ.ಪರಿಹಾರ ನೀಡಿದ್ದು, ನಾನೂ 1ಲಕ್ಷ ಪರಿಹಾರ ನೀಡುತ್ತಿದ್ದೇನೆ. ಜತೆಗೆ ರಾಜ್ಯ ಸರಕಾರದಿಂದಲೂ ಪರಿಹಾರ ದೊರೆಯಲಿದೆ ಎಂದರು.

ಗಾಯಾಳುಗಳ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರಕಾರದಿಂದ ಭರಿಸಲಿದೆ. ನಿನ್ನೆ ವಿಜಯಪುರ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಹಳದೂರು ಗ್ರಾಮದ ಆರು ಮಂದಿ ಮೃತಪಟ್ಟಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ತೀವ್ರ ಬರ ಸ್ಥಿತಿ ಆವರಿಸಿದ್ದು, ಮಹಾರಾಷ್ಟ್ರ ಸರಕಾರ ಮಾನವೀಯತೆ ದೃಷ್ಟಿಯಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು. ಮೈತ್ರಿ ಸರಕಾರ ಎಂದು ನಿರ್ಲಕ್ಷ್ಯ ಮಾಡಬಾರದು. ಬಿಜೆಪಿಯವರೂ ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News