ಕೆಂಡದಂತಾದ ಕಲಬುರಗಿ: 44.1 ಡಿಗ್ರಿ ರಣ ಬಿಸಿಲಿಗೆ ಸುಡುತ್ತಿದೆ ಭೂಮಿ

Update: 2019-05-19 15:31 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಮೇ 19: ಕಲಬುರಗಿ ಈಗ ಅಕ್ಷರಶಃ ಕೆಂಡವಾಗಿದೆ. ರಣಬಿಸಿಲು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಬೆಳಗ್ಗೆ 7 ಗಂಟೆಯಷ್ಟೊತ್ತಿಗೆ ಬಿಸಿಲ ಪ್ರಕೋಪ ಶುರುವಾಗುತ್ತಿದ್ದು, 10-11ಗಂಟೆಯಷ್ಟೊತ್ತಿಗೆ ಸುಡು ಬಿಸಿಲಿನಿಂದ ಭೂಮಿ ಸುಡುತ್ತಿದೆ.

ಹವಾಮಾನ ಇಲಾಖೆಯ ಮಾಹಿತಿ ಅನುಸಾರ ರವಿವಾರ ಹಗಲು 44.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 3.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ರಾತ್ರಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಹ ಕಳೆದ ವರ್ಷಕ್ಕಿಂತ 4.3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಬಿಸಿಲ ಪ್ರಕೋಪಕ್ಕೆ ಜನ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಗಡೆ ಓಡಾಡುವುದೇ ದುಸ್ಥರವಾದಂತಾಗಿದೆ. ಕೆಂಡದಂತಹ ಬಿಸಿಲು ಜನರು ಮನೆಯಿಂದ ಹೊರಬರದಂತೆ ಕಟ್ಟಿಹಾಕುತ್ತಿದ್ದು, ಬಿರು ಬಿಸಿಲನಲ್ಲಿನ ಓಡಾಟ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಡುತ್ತಿದೆ. ಬಿಸಿಲು, ಜಳ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಬಿಸಿಲು ಮತ್ತು ಜಳದ ಹೊಡೆತದಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ಜನ ಆಸ್ಪತ್ರೆಗೆ ಸೇರುತ್ತಿದ್ದಾರೆ.

ನೆರೆಯ ರಾಯಚೂರು ಜಿಲ್ಲೆಯಲ್ಲಿಯೂ ಬಿಸಿಲ ತಾಪ ಹೆಚ್ಚಾಗಿದ್ದು, ರವಿವಾರ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ 41.5, ವಿಜಯಪುರ ಜಿಲ್ಲೆಯಲ್ಲಿ 41, ಬೀದರ್ ಜಿಲ್ಲೆಯಲ್ಲಿ 40.6, ಬಾಗಲಕೋಟ ಜಿಲ್ಲೆಯಲ್ಲಿ 40.6, ದಾವಣಗೆರೆಯಲ್ಲಿ 39, ಗದಗ ಜಿಲ್ಲೆಯಲ್ಲಿ 39.5, ಹಾವೇರಿ ಜಿಲ್ಲೆಯಲ್ಲಿ 39.2 ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಜಯಪುರ, ಬೀದರ್, ಬಾಗಲಕೋಟ ಜಿಲ್ಲೆಯಲ್ಲಿ ಹಗಲು ಮತ್ತು ರಾತ್ರಿ ತಾಪಮಾನ ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಈ ವರ್ಷ ಮತ್ತು ಹೆಚ್ಚಾಗಿದೆ. ಹಗಲು ರಣಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿರುವ ಜನ ರಾತ್ರಿ ಧಗೆಯ ಕಾರಣಕ್ಕೆ ನಿದ್ರೆಸಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಬಿಸಿಲ ತಾಪ, ಇನ್ನೊಂದೆಡೆ ಕುಡಿಯುವ ನೀರಿನ ಬವಣೆ, ಒಟ್ಟಾರೆ ಈ ಬರಿ ಜನ ಬಿಸಿಲ ಹೊಡೆತ ಮತ್ತು ಕುಡಿಯುವ ನೀರಿನ ತಾಪತ್ರಯ ಈ ಜಿಲ್ಲೆಗಳ ಜನರು ತತ್ತರಿಸಿ ಹೋಗುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News