ಗೋಡ್ಸೆ ಪರ ಹೇಳಿಕೆ: ಪ್ರಜ್ಞಾಸಿಂಗ್ ವಿರುದ್ಧ ದಾವಣಗೆರೆ ಜಿಲ್ಲಾ ಕಾಂಗ್ರೆಸ್‍ನಿಂದ ಪ್ರತಿಭಟನೆ

Update: 2019-05-19 16:12 GMT

ದಾವಣಗೆರೆ, ಮೇ 19: ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಸಾದ್ವಿ ಪ್ರಜ್ಞಾಸಿಂಗ್ ಬಿಂಬಿಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಪ್ರತಿಭಟನೆ ನಡೆಸಲಾಯಿತು.

ರವಿವಾರ ನಗರದ ಪಾಲಿಕೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿತು.
ಈ ಸಂದರ್ಭ ಕಾಂಗ್ರೆಸ್ ಮುಖಂಡರು ಮಾತನಾಡಿ, ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವನ್ನಾಗಿ ಮಾಡಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಪ್ರಜ್ಞಾಸಿಂಗ್ ಹೇಳಿರುವುದನ್ನು ಹಾಗೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಅನಂತ್‍ಕುಮಾರ್ ಹೆಗಡೆ ಹಾಗೂ ನಳಿನ್‍ಕುಮಾರ್ ಕಟೀಲ್ ರಾಷ್ಟ್ರಪಿತನಿಗೆ ಅವಮಾನ ಮಾಡುವ ಮೂಲಕ ದೇಶದ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜ್ಞಾಸಿಂಗ್ ಹೇಳಿಕೆಗೆ ಸಾಥ್ ನೀಡುತ್ತಿರುವ ಕರ್ನಾಟಕ ಅನಂತ್‍ಕುಮಾರ್ ಹೆಗಡೆ ಹಾಗೂ ನಳಿನ್‍ಕುಮಾರ್ ಕಟೀಲ್ ದೇಶದ ಕೋಮುಸೌಹಾರ್ಧತೆಯನ್ನು ಕದಡಲು ಹೊರಟಿದ್ದಾರಲ್ಲದೆ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ದೇಶದ ಪ್ರಜ್ಞಾವಂತ ಜನರು ಇಂತಹ ಕೋಮುವಾದಿಗಳಿಗೆ ತಕ್ಕಪಾಠ ಕಲಿಸಬೇಕು ಎಂದರು. ದೇಶದ ಜನರ ಮುಂದೆ ಇವರುಗಳು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸೋಮ್ಲಾಪುರ ಹನುಮಂತಪ್ಪ, ಎ.ನಾಗರಾಜ್, ಕೆ.ಜಿ.ಶಿವಕುಮಾರ್, ಅಯೂಬ್ ಪೈಲ್ವಾನ್, ಜಿ.ಬಿ.ಲಿಂಗರಾಜ್, ಎಂ.ಹಾಲೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News