ಮುದ್ದೇಬಿಹಾಳ: ಎರಡು ಗುಂಪುಗಳ ನಡುವೆ ಮಾರಾಮಾರಿ; 18ಕ್ಕೂ ಹೆಚ್ಚು ಮಂದಿಗೆ ಗಾಯ

Update: 2019-05-19 17:21 GMT

ಮುದ್ದೇಬಿಹಾಳ, ಮೇ 19: ಹಳೇ ವೈಷಮ್ಯ ಹಿನ್ನೆಲೆ ತಾಲೂಕಿನ ನೇಬಗೇರಿಯಲ್ಲಿ ಎರಡು ಗುಂಪುಗಳ ನಡುವೆ ರವಿವಾರ ರಾತ್ರಿ ಮಾರಾಮಾರಿ ನಡೆದಿದ್ದು ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದರಿಂದ ಎರಡೂ ಗುಂಪಿನ 18ಕ್ಕೂ ಹೆಚ್ಚು ಜನರು ಗಾಯಗೊಂಡು ಇವರಲ್ಲಿ ಓರ್ವ ಮಹಿಳೆ ಸೇರಿ 5 ಮಂದಿಗೆ ಗಂಭೀರ ಗಾಯಗಳಾದ ಘಟನೆ ನಗರದಲ್ಲಿ ನಡೆದಿದೆ.

ವೆಂಕಟೇಶ ನಾಯಕ, ಶಿವಾಜಿ ಲಮಾಣಿ, ರವಿ ಲಮಾಣಿ ಹಾಗೂ ರೇಷ್ಮಾ ಲಮಾಣಿ, ಶ್ರೀಕಾಂತ ನಾಯಕ ಇವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ ಒಂದು ಗುಂಪಿನ 4 ಮತ್ತು ಇನ್ನೊಂದು ಗುಂಪಿನ 9 ಜನರಿಗೆ ಗಾಯಗಳಾಗಿದ್ದು ಇವರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡವರನ್ನು ಚಿಕಿತ್ಸೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತಂದ ವಿಷಯ ತಿಳಿದ ಒಂದು ಗುಂಪಿನ ಕೆಲವರು ಹಿಂಬಾಲಿಸಿಕೊಂಡು ಆಸ್ಪತ್ರೆಗೂ ಬಂದು ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರಿಂದಾಗಿ ಆಸ್ಪತ್ರೆಯಲ್ಲಿ ಕೆಲ ಹೊತ್ತು ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪೊಲೀಸರು ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ವಿಷಯ ತಿಳಿದು ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಿಡಗುಂದಿ ಠಾಣೆಗಳ ಪಿಎಸೈ ಮತ್ತು ಜಿಲ್ಲಾ ಮೀಸಲು ಪಡೆಯ ಪೊಲೀಸರು ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಹಳೇ ವೈಷಮ್ಯ ಕಾರಣ: ನೇಬಗೇರಿ ಗ್ರಾಮ ಮತ್ತು ತಾಂಡಾ ಎರಡೂ ಒಂದಕ್ಕೊಂದು ಹೊಂದಿಕೊಂಡಿವೆ. ತಾಂಡಾದಲ್ಲಿ ಮತ್ತು ಊರಲ್ಲಿ ಲಂಬಾಣಿ ಸಮಾಜದವರು ವಾಸವಾಗಿದ್ದಾರೆ. ಈ ಸಮಾಜದ ಎರಡು ಕುಟುಂಬಗಳ ನಡುವೆ ಸೇವಾಲಾಲ ಭವನಕ್ಕೆ ಮೀಸಲಿರಿಸಿದ್ದು ಎನ್ನಲಾದ ಜಾಗಕ್ಕೆ ಸಂಬಂಧಿಸಿದಂತೆ ಹಳೇ ವೈಷಮ್ಯ ಇದೆ. ಗ್ರಾಮದಲ್ಲಿ ಒಂದು ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರು ನಿಧನರಾಗಿದ್ದರಿಂದ ಅವರ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಆ ಕುಟುಂಬದ ಬಂಧುಗಳು ಒಂದೆಡೆ ಸೇರಿ ಚರ್ಚಿಸಿದ್ದಾರೆ. ಈ ಸಂದರ್ಭ ಎರಡು ಕುಟುಂಬಗಳ ನಡುವೆ ಇದ್ದ ವೈಷಮ್ಯ ಮತ್ತೆ ಭುಗಿಲೆದ್ದು ಈ ಮಾರಾಮಾರಿ ನಡೆದಿದೆ ಎನ್ನಲಾಗಿದೆ. 

ಖಾಸಗಿ ಜಾಗಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಜಗಳ ಇದೆ. ನಿನ್ನೆ ಊರಲ್ಲಿ ಒಂದು ಕುಟುಂಬಕ್ಕೆ ಸೇರಿದವರೊಬ್ಬರು ನಿಧನರಾಗಿದ್ದರು. ಇವರ ಅಂತ್ಯಸಂಸ್ಕಾರಕ್ಕೆ ವಿವಿಧೆಡೆಯಿಂದ ಬಂಧುಗಳು ಆಗಮಿಸಿದ್ದರು. ಈ ವೇಳೆ ಹಳೇ ವೈಷಮ್ಯ ಉಲ್ಭಣಗೊಂಡು ಈ ಘಟನೆ ನಡೆದಿದೆ. ಮುದ್ದೇಬಿಹಾಳ, ನಿಡಗುಂದಿ, ಬಸವನ ಬಾಗೇವಾಡಿ ಠಾಣೆಗಳಿಂದ ಪಿಎಸೈ, ಒಂದು ಡಿಆರ್ ವ್ಯಾನ್ ಪೊಲೀಸರನ್ನು ಗ್ರಾಮದಲ್ಲಿ ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
-ಮಹೇಶ್ವರಗೌಡ ಎಸ್.ಯು., ಡಿವೈಎಸ್ಪಿ, ಬಸವನ ಬಾಗೇವಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News