ಸಂಕಷ್ಟದಲ್ಲಿರುವ ಒಡಿಶ್ಶಾ ರಾಜ್ಯಕ್ಕೆ ಕರ್ನಾಟಕದ ನೆರವಿನ ಹಸ್ತ

Update: 2019-05-19 18:12 GMT

ಶಿವಮೊಗ್ಗ, ಮೇ 19: ಇತ್ತೀಚೆಗೆ 'ಫನಿ' ಚಂಡಮಾರುತದಿಂದ ತತ್ತರಿಸಿರುವ ಒಡಿಶ್ಶಾ ರಾಜ್ಯದಲ್ಲಿ, ಸುಮಾರು 5 ಲಕ್ಷಕ್ಕೂ ಅಧಿಕ ಜನ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆ ರಾಜ್ಯದ ವಿದ್ಯುತ್ ಸಂಪರ್ಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳು ಕಾರ್ಗತ್ತಲಲ್ಲಿವೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿರುವ ಒಡಿಶ್ಶಾಕ್ಕೆ, ಕರ್ನಾಟಕ ನೆರವಿನ ಹಸ್ತ ಚಾಚಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಪುನರ್ ಸ್ಥಾಪನೆಗೆ ನೆರವಾಗಿದೆ. 

ಒಡಿಶ್ಶಾದ ಕೋರಿಕೆಯಂತೆ, ಇಂಧನ ಇಲಾಖೆಯ ಸುಮಾರು 800 ಜನರ ಅಧಿಕಾರಿ-ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಾಜ್ಯ ಸರ್ಕಾರ ಒಡಿಶ್ಶಾಕ್ಕೆ ಕಳುಹಿಸಿದೆ. ಈಗಾಗಲೇ ಈ ತಂಡವು ಒಡಿಶ್ಶಾದ ಸಂತ್ರಸ್ತ ಪೀಡಿತ ಪ್ರದೇಶಗಳ ವಿದ್ಯುತ್ ಜಾಲ ಸರಿಪಡಿಸುವ ಕಾರ್ಯದಲ್ಲಿ ಹಗಲಿರುಳು ಕಾರ್ಯಾಚರಿಸುತ್ತಿದೆ. 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ದ ಅಂಗಸಂಸ್ಥೆಗಳಾದ ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ನಿಗಮ), ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ನಿಗಮ), ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ), ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಗಮ) ಹಾಗೂ ಸಿಇಎಸ್‍ಸಿ (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ) ದ ಎಂಜಿನಿಯರ್-ಸಿಬ್ಬಂದಿಗಳು ಒಡಿಶ್ಶಾಕ್ಕೆ ತೆರಳಿದ್ದಾರೆ. 

ತಂಡದಲ್ಲಿ ಕಾರ್ಯಪಾಲಕ ಅಭಿಯಂತರರು (ಇ.ಇ.), ಸಹಾಯಕ ಕಾರ್ಯಪಾಲಕ ಅಭಿಯಂತರರು (ಎ.ಇ.ಇ.), ಸಹಾಯಕ, ಜೂನಿಯರ್ ಎಂಜಿಯರ್ ಗಳು,ಲೈನ್‍ಮ್ಯಾನ್‍ಗಳು, ಮೇಸ್ತ್ರೀಗಳಿದ್ದಾರೆ. ಆಯಾ ವಿದ್ಯುತ್ ಸರಬರಾಜು ನಿಗಮಗಳು ತಮ್ಮ ವ್ಯಾಪ್ತಿಯಿಂದ ಪ್ರತ್ಯೇಕವಾಗಿ ತಂಡಗಳನ್ನು ಒಡಿಶ್ಶಾಕ್ಕೆ ಕಳುಹಿಸಿದೆ ಎಂದು ಇಂಧನ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

ಕಿಟ್ ನೀಡಿಕೆ: ಒಡಿಶ್ಶಾಕ್ಕೆ ತೆರಳಿರುವ ಅಧಿಕಾರಿ-ಸಿಬ್ಬಂದಿಗಳಿಗೆ ಅಗತ್ಯ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಗಿದೆ. ಇದರಲ್ಲಿ ಚಾಪೆ, ಬೆಡ್‍ಶೀಟ್, ಸೊಳ್ಳೆ ಪರದೆ, ಸೊಳ್ಳೆ ಕಚ್ಚದಂತೆ ಮೈಗೆ ಹಚ್ಚಿಕೊಳ್ಳುವ ಲೋಷನ್ ಇದೆ. ಸಂತ್ರಸ್ತ ಪ್ರದೇಶಗಳಲ್ಲಿ ಸಮುದಾಯ ಭವನ ಮತ್ತಿತರೆಡೆ ಸಿಬ್ಬಂದಿಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ನೆರವು ಕಾರ್ಯದಲ್ಲಿ ಭಾಗಿಯಾಗಿರುವ ಸಿಬ್ಬಂದಿಯೋರ್ವರು ಮಾಹಿತಿ ನೀಡುತ್ತಾರೆ. 

ಭಾರೀ ನಷ್ಟ: ಫನಿ ಚಂಡಮಾರುತದಿಂದ ಒಡಿಶ್ಶಾ ರಾಜ್ಯದ ವಿದ್ಯುತ್ ಕ್ಷೇತ್ರಕ್ಕೆ ಭಾರೀ ಧಕ್ಕೆಯಾಗಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ 1160 ಕೋಟಿ ರೂ.ಗಳಷ್ಟು ನಷ್ಟವಾಗಿದೆ. 1 ಲಕ್ಷಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಹಾಗೆಯೇ ಹೈಟೆನ್ಸನ್ ವಿದ್ಯುತ್ ಲೈನ್‍ಗಳು ಬಿದ್ದು ಹೋಗಿವೆ. ಪವರ್ ಸ್ಟೇಷನ್‍ಗಳು ದುರಸ್ತಿಗೀಡಾಗಿವೆ. ವಿದ್ಯುತ್ ಲೈನ್‍ಗಳು ಕಿತ್ತು ಹೋಗಿವೆ. ಹಲವೆಡೆ ಹೊಸದಾಗಿಯೇ ವಿದ್ಯುತ್ ಜಾಲ ಪುನಾರಾರಂಭಿಸಬೇಕಾದ ಸ್ಥಿತಿಯಿದೆ. 

'ಫನಿ' ಚಂಡಮಾರುತ ಒಡಿಶ್ಶಾ ದಾಟಿ ಹಲವು ದಿನಗಳೇ ಆಗಿದ್ದರೂ ಇಲ್ಲಿಯವರೆಗೂ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ. ನಾಗರಿಕರು ಕತ್ತಲಲ್ಲಿಯೇ ದಿನದೂಡುವಂತಾಗಿದೆ. 

ಈ ಕಾರಣದಿಂದ ಒಡಿಶ್ಶಾ ಸರ್ಕಾರವು ವಿದ್ಯುತ್ ಜಾಲ ಪುನರ್ ವ್ಯವಸ್ಥೆಗೆ ವಿವಿಧ ರಾಜ್ಯಗಳ ಮಾನವ ಸಂಪನ್ಮೂಲದ ನೆರವು ಕೇಳಿತ್ತು. ಅದರಂತೆ ರಾಜ್ಯವು ವಿದ್ಯುತ್ ವಿತರಣ ಸಂಸ್ಥೆಗಳ ನಿಪುಣ ಎಂಜಿನಿಯರ್-ನೌಕರರ ತಂಡವನ್ನು ಕಳುಹಿಸಿಕೊಟ್ಟಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸುತ್ತವೆ. 

ಮೆಸ್ಕಾಂನಿಂದ 64 ಜನರ ಟೀಂ 

ಮಂಗಳೂರು, ಉಡುಪಿ, ಚಿಕ್ಕಮಳಗೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ, ಮಂಗಳೂರು ವಿದ್ಯುತ್ ಸರಬರಾಜು ನಿಗಮ (ಮೆಸ್ಕಾಂ) ದಿಂದ ಎಂಜಿನಿಯರ್-ವಿವಿಧ ಹಂತದ ಸಿಬ್ಬಂದಿಗಳನ್ನೊಳಗೊಂಡ 64 ಜನರ ತಂಡವನ್ನು ಒಡಿಶ್ಶಾಕ್ಕೆ ಕಳುಹಿಸಲಾಗಿದೆ. ಮೆಸ್ಕಾಂ ತಂಡದ ನೇತೃತ್ವವನ್ನು ಶಿವಮೊಗ್ಗ ತಾಲೂಕು ಕುಂಸಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಮಂಜುನಾಯ್ಕ್ ರವರಿಗೆ ವಹಿಸಲಾಗಿದೆ. ಮೆಸ್ಕಾಂ ವಲಯದಲ್ಲಿ ದಕ್ಷ ಕಾರ್ಯನಿರ್ವಹಣೆ ಮೂಲಕ ಮಂಜುನಾಯ್ಕ್ ರವರು ಗಮನ ಸೆಳೆದಿದ್ದಾರೆ. ತಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಪ್ರಸ್ತುತ ಕುಂಸಿ ಉಪ ವಿಭಾಗ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಅವರ ಪಾತ್ರ ಅತ್ಯಂತ ಗಮನಾರ್ಹವಾಗಿದೆ. ಈ ಎಲ್ಲ ಕಾರಣಗಳಿಂದ ಮೆಸ್ಕಾಂನಿಂದ ಒಡಿಶ್ಶಾಕ್ಕೆ ತೆರಳಿರುವ ತಂಡಕ್ಕೆ ಮಂಜಾನಾಯ್ಕ್ ರವರಿಗೆ ಮೇಲುಸ್ತುವಾರಿ ವಹಿಸಲಾಗಿದೆ. 

ಪ್ರಾಮಾಣಿಕ ಕಾರ್ಯನಿರ್ವಹಣೆ: ಎ.ಇ.ಇ. ಮಂಜುನಾಯ್ಕ್
ಮೆಸ್ಕಾಂನಿಂದ 64 ಜನರ ತಂಡ ಒಡಿಶ್ಶಾಕ್ಕೆ ಬಂದಿದ್ದೆವೆ. ಪುರಿ, ಕಟಕ್ ಮೊದಲಾದೆಡೆ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ. ಈ ಪ್ರದೇಶಗಳ ವಿದ್ಯುತ್ ಜಾಲದಲ್ಲಿ ಭಾರೀ ಪ್ರಮಾಣದ ಏರುಪೇರಾಗಿದೆ. ಅಪಾರ ಪ್ರಮಾಣದ ನಷ್ಟವಾಗಿದೆ. ಕೆಲವೆಡೆ ಹೊಸದಾಗಿಯೇ ವಿದ್ಯುತ್ ಜಾಲ ಸುಧಾರಿಸಬೇಕಾದಂತಹ ಸ್ಥಿತಿಯಿದೆ. ಕ್ಲಿಷ್ಟ ಪರಿಸ್ಥಿತಿಯ ನಡುವೆಯೂ ಮೆಸ್ಕಾಂ ತಂಡ, ಪ್ರಾಮಾಣಿಕ ಕಾರ್ಯನಿರ್ವಹಣೆ ಮಾಡುತ್ತಿದೆ. ಸಂತ್ರಸ್ತ ಪ್ರದೇಶಗಳಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದೇವೆ' ಎಂದು ಒಡಿಶ್ಶಾಕ್ಕೆ ತೆರಳಿರುವ ಮೆಸ್ಕಾಂ ತಂಡದ ನೇತೃತ್ವವಹಿಸಿರುವ ಶಿವಮೊಗ್ಗ ತಾಲೂಕು ಕುಂಸಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಮಂಜುನಾಯ್ಕ್ ರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News