‘ಕಾಂಗ್ರೆಸ್ ಸಾಯಬೇಕು’: ಚರ್ಚೆಗೆ ಗ್ರಾಸವಾದ ಯೋಗೇಂದ್ರ ಯಾದವ್ ಹೇಳಿಕೆ

Update: 2019-05-20 15:00 GMT

ಹೊಸದಿಲ್ಲಿ,ಮೇ 20: ಲೋಕಸಭಾ ಚುನಾವಣೆಗಳಿಗೆ ರವಿವಾರ ಸಂಜೆ ಪೂರ್ಣವಿರಾಮ ಬಿದ್ದ ಬೆನ್ನಿಗೇ ಟಿವಿ ಪರದೆಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪುಂಖಾನುಪುಂಖವಾಗಿ ಹರಿಯತೊಡಗಿದ್ದವು. ಬಿಜೆಪಿ ನೇತೃತ್ವದ ಎನ್‌ಡಿಎ ಸಾಕಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ರಾಜಕೀಯದ ಭವಿಷ್ಯ ಹೇಗಿರಬಹುದು ಎನ್ನುವುದರ ಕುರಿತು ಭಾರೀ ಚರ್ಚೆಗಳು ಮತ್ತು ಊಹಾಪೋಹಗಳೂ ನಡೆದಿವೆ. ಇವೆಲ್ಲದರ ನಡುವೆ,ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಬಿಜೆಪಿಯ ಹಿಡಿತದಿಂದ ಭಾರತದ ಪರಿಕಲ್ಪನೆಯನ್ನು ರಕ್ಷಿಸುವಲ್ಲಿ ವಿಫಲಗೊಂಡಿರುವುದರಿಂದ ಆ ಪಕ್ಷವು ‘ಸಾಯಬೇಕು’ ಎಂದು ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು ಇಂಡಿಯಾ ಟುಡೇ ವಾಹಿನಿಯಲ್ಲಿ ನೀಡಿದ ಹೇಳಿಕೆಯು ವಿವಾದವನ್ನು ಸೃಷ್ಟಿಸಿದೆ.

‘‘ಕಾಂಗ್ರೆಸ್ ಸಾಯಲೇಬೇಕು ಎಂದು ಎಲ್ಲ ಗಂಭೀರತೆಯಿಂದ,ಉತ್ಪ್ರೇಕ್ಷೆ,ಕೋಪ ಮತ್ತು ಯಾವುದೇ ಭಾವೋದ್ವೇಗವಿಲ್ಲದೆ ನಾನು ಹೇಳುತ್ತಿದ್ದೇನೆ. ಇದು ಭಾರತದ ಆತ್ಮಕ್ಕಾಗಿ ನಡೆದ ಚುನಾವಣೆಯಾಗಿತ್ತು. ಭಾರತದ ಪರಿಕಲ್ಪನೆಯನ್ನು ಪಣಕ್ಕೊಡ್ಡಲಾಗಿತ್ತು. ತಾನು ಸಾಂವಿಧಾನಿಕ ಮೌಲ್ಯಗಳ ಪರವಾಗಿದ್ದೇನೆ,ತಾನು ಜಾತ್ಯತೀತ ಭಾರತದ ಪರವಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಈ ಕಾಂಗ್ರೆಸ್ ಪಕ್ಷಕ್ಕೆ ಪ್ರತಿರೋಧಿಸಲು ಸಾಧ್ಯವಿಲ್ಲದಿದ್ದರೆ,ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಿಲ್ಲದಿದ್ದರೆ ಅದು ಅಸ್ತಿತ್ವದಲ್ಲಿರಲು ಯಾವುದೇ ಕಾರಣಗಳಿಲ್ಲ. ಈ ಪಕ್ಷವು ದೇಶದಲ್ಲಿ ತನ್ನ ಐತಿಹಾಸಿಕ ಪಾತ್ರವನ್ನು ಮುಗಿಸಿದೆ. ಇಂದು ಕಾಂಗ್ರೆಸ್ ಪಕ್ಷವು ಪರ್ಯಾಯವೊಂದನ್ನು ರೂಪಿಸುವ ದಾರಿಯಲ್ಲಿ ಏಕೈಕ ಬೃಹತ್ ಅಡಚಣೆಯಾಗಿದೆ. ಇದು(ಬಿಜೆಪಿಗೆ ಅಧಿಕಾರ) ವ್ಯಾಪಕ ಪ್ರವೃತ್ತಿಯಾಗಿದ್ದರೆ ಈ ವಿಭಜಕ ರಾಜಕಾರಣಕ್ಕೆ ಪರ್ಯಾಯವೊಂದು ಈ ದೇಶಕ್ಕೆ ಅತ್ಯಂತ ಅಗತ್ಯವಾಗಿದೆ ಮತ್ತು ಇಂತಹ ಪರ್ಯಾಯವನ್ನು ನೀಡಲು ಸ್ಥಾಪಿತ ಪ್ರತಿಪಕ್ಷವು ವಿಫಲಗೊಂಡಿದೆ. ಪರ್ಯಾಯ ವ್ಯವಸ್ಥೆಯೊಂದು ಅತ್ಯಂತ ಅಗತ್ಯವಾಗಿರುವ ಹತಾಶ ಸ್ಥಿತಿಯಲ್ಲಿ ದೇಶವಿದೆ ’’ ಎಂದು ಯಾದವ್ ಹೇಳಿದರು.

ಆದರೆ ಯಾದವ್ ಮಾತನ್ನೊಪ್ಪದ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್,ಮಹಿಳಾ ಕಾಂಗ್ರೆಸ್ ನಾಯಕಿ ಅಪ್ಸರಾ ಆರ್. ಮತ್ತು ಪತ್ರಕರ್ತೆ ಸಂಜುಕ್ತಾ ಬಸು ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು ಎಂದು ಕೆಲವರು ಹೇಳಿದರೆ, ಭಾಷಣಗಳು ರಾಹುಲ್ ಗಾಂಧಿಯವರ ಸಣ್ಣಪುಟ್ಟ ತಪ್ಪುಗಳನ್ನೂ ದೊಡ್ಡದಾಗಿ ಬಿಂಬಿಸಿದ್ದು ಮತ್ತು ಗಾಂಧಿ ಕುಟುಂಬದೆಡೆಗಿನ ದ್ವೇಷವು ಈ ಚುನಾವಣೆಯಲ್ಲಿ ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದ್ದನ್ನೇ ಮಾಡಿವೆ ಎಂದು ಇತರರು ವಾದಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನ ಪ್ರಸ್ತುತತೆಯನ್ನು ಕಾಯ್ದುಕೊಳ್ಳಲು ತನ್ನ ಆತ್ಮಶೋಧನೆ ಮಾಡಿಕೊಳ್ಳುವ ಅಗತ್ಯವಿದೆ ಮತ್ತು ಪಕ್ಷದೊಳಗೆ ವಂಶ ಪಾರಂಪರ್ಯ ರಾಜಕೀಯವನ್ನು ದೂರವಿಡುವ ಅಗತ್ಯವಿದೆ ಎಂದು ಕೆಲವರು ಹೇಳಿದ್ದರೆ,ಇನ್ನು ಕೆಲವರು ಯೋಗೇಂದ್ರ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗಲು ಯಾದವ್ ಮತ್ತು ಅವರ ಪಕ್ಷವೇನು ಮಾಡುತ್ತಿವೆ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News