ಮೋದಿ ಜೊತೆ ಬಿಎಸ್‌ವೈ ಪ್ರಮಾಣ ವಚನ ಸ್ವೀಕಾರ: ಶ್ರೀರಾಮುಲು

Update: 2019-05-20 16:24 GMT

ಬಳ್ಳಾರಿ, ಮೇ 20: ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಪರವಾಗಿವೆ. ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೆ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತಾಗಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದ್ದಾರೆ.

ಸೋಮವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಮೇಲುಗೈ ಸಾಧಿಸಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟ ತೀವ್ರ ಹಿನ್ನಡೆ ಅನುಭವಿಸಿದೆ. ರಾಜ್ಯದಲ್ಲಿಯೂ ಬದಲಾವಣೆಯಾಗಬೇಕಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ಐದು ವರ್ಷಗಳ ಕಾಲ ಪ್ರಾಮಾಣಿಕ ಸರಕಾರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಜನರು ಮೋದಿ ಹಾಗೂ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ನಾನು ಅವರ ಜೊತೆ ಮೂರುವರೆ ವರ್ಷ ಸಂಸತ್ತಿನಲ್ಲಿ ಕೆಲಸ ಮಾಡಿದ್ದೇನೆ ಎಂದು ಶ್ರೀರಾಮುಲು ಹೇಳಿದರು.

ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಸಮರ್ಥ ನಾಯಕತ್ವವಿಲ್ಲ. ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡರೂ, ಅವರು ಸರಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಶ್ರೀರಾಮುಲು ತಿಳಿಸಿದರು.

ಮಾಧ್ಯಮಗಳಲ್ಲಿ ನಿನ್ನೆ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಲಿವೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರಕಾರದಿಂದ ಜನತೆ ಬೇಸತ್ತಿದ್ದು, ಮೋದಿ ಜೊತೆಯಲ್ಲಿ ಯಡಿಯೂರಪ್ಪ ಕೂಡ ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡ 24 ಗಂಟೆಯಲ್ಲಿ ರಾಜ್ಯ ಸರಕಾರ ಪತನವಾಗಬೇಕು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿಯಿದ್ದರೂ, ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News