ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ: ಮಂಡ್ಯ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್

Update: 2019-05-20 17:14 GMT

ಮಂಡ್ಯ, ಮೇ 20: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಮೇ 23 ರಂದು ನಡೆಯಲಿದ್ದು, ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದ್ದಾರೆ.

14 ಕೊಠಡಿಗಳಲ್ಲಿ 108 ಟೇಬಲ್‍ಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ. 1 ಕೊಠಡಿಯ 5 ಟೇಬಲ್‍ಗಳಲ್ಲಿ ಅಂಚೆ ಮತ ಎಣಿಕೆ ನಡೆಯಲಿದ್ದು, ಒಟ್ಟು 22 ಸುತ್ತುಗಳಲ್ಲಿ ಮತ ಎಣಿಕೆಯಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ತೆಗೆಯಲಾಗುವುದು. 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಪ್ರತಿ ಮತಗಟ್ಟೆ ಕೇಂದ್ರಗಳಿಗೆ ತಲಾ 2ರಂತೆ 28 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೊನೆಯಲ್ಲಿ ವಿವಿ ಪ್ಯಾಟ್ ಸ್ಲಿಪ್ ಎಣಿಕೆ. ತಾಂತ್ರಿಕ ಕಾರಣದಿಂದ ಮತ ಎಣಿಕೆ ಸಾಧ್ಯವಾಗದಿದ್ದರೆ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

117 ಮಂದಿ ಎಣಿಕೆ ಮೇಲ್ವಿಚಾರಕರು, 116 ಸಹಾಯಕರು, 134 ಮೈಕ್ರೋ ಅಬ್ಸರ್ವರ್ ಗಳು ಸೇರಿ ಒಟ್ಟು 367 ಮಂದಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಎಣಿಕೆ ಕೇಂದ್ರಕ್ಕೆ ಮೊಬೈಲ್ ಕೊಂಡೊಯ್ಯಲು ಚುನಾವಣಾ ವೀಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ಸೈನಿಕನ ಮತ ಅಸಿಂಧು: ಅಂಚೆ ಮತದಾನ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಯೋಧ ಆರ್.ನಾಯಕ್ ಅವರ ಮತವನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಅಸಿಂಧುಗೊಳಿಸಲಾಗಿದೆ ಎಂದು ಪಿ.ಸಿ.ಜಾಫರ್ ತಿಳಿಸಿದರು.

ಸಿಆರ್‍ಪಿಎಪ್ ಯೋಧ ಆರ್.ನಾಯಕ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಮತದಾನ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಗೌಪ್ಯತೆ ಕಾಪಾಡುವಲ್ಲಿ ವಿಫಲವಾಗಿದ್ದ ಆರೋಪ ಅವರ ಮೇಲಿತ್ತು.

144 ಸೆಕ್ಷನ್ ಜಾರಿ: ಶಾಂತಿ ಸುವ್ಯವಸ್ಥೆಗಾಗಿ ಮೇ 23ರ ಬೆಳಗ್ಗೆ 6 ಗಂಟೆಯಿಂದ 24ರ ಮಧ್ಯರಾತ್ರಿವರೆಗೆ ಜಿಲ್ಲಾದ್ಯಂತ 144ನೇ ಸೆಕ್ಷನ್ ಜಾರಿ ಮಾಡಲಾಗಿದ್ದು, ಈ ಅವಧಿಯಲ್ಲಿ  ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ ಎಂದು ಜಾಫರ್ ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸಿವಿಲ್ ಪೊಲೀಸರ ಜತೆಗೆ ಸಿಆರ್‍ಪಿಎಫ್ ಹಾಗೂ ಬಿಎಸ್‍ಎಫ್ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News