ವಿದ್ಯುತ್ ತಂತಿ ತಗುಲಿ ರೈತ ಸಾವು

Update: 2019-05-20 17:17 GMT

ಪಾಂಡವಪುರ, ಮೇ 20: ಸೆಸ್ಕ್ ಇಲಾಖಾಧಿಕಾರಿಗಳ ನಿರ್ಲಕ್ಷದಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೋಡಹಳ್ಳಿ ಹೊಸೂರು ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಗ್ರಾಮದ ನಿವಾಸಿ ದೇವರಾಜು(39) ಎಂಬ ರೈತ ಮೃತಪಟ್ಟಿದ್ದು, ಜಮೀನಿನಲ್ಲಿ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿರುವ ವಿಷಯ ತಿಳಿಸಿದರೂ ಘಟನಾ ಸ್ಥಳಕ್ಕೆ ಸೆಸ್ಕ್ ಇಲಾಖಾಧಿಕಾರಿಗಳು ಧಾವಿಸದಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮೃತ ರೈತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸೆಸ್ಕ್ ಇಲಾಖಾಧಿಕಾರಿಗಳ ನಿರ್ಲಕ್ಷದಿಂದ ರೈತ ಸಾವನ್ನಪ್ಪಿದ್ದಾನೆ ಎಂದು ಮೃತ ರೈತರ ಕುಟುಂಬ ಆರೋಪಿಸಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಸೆಸ್ಕ್ ಇಲಾಖೆಯ ಕಾರ್ಯನಿರ್ವಾಹಕ ಎಂಜನಿಯರ್ ಸೋಮರಾಜು, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ವಿ.ಪುಟ್ಟಸ್ವಾಮಿ ಭೇಟಿ ನೀಡಿ ಮೃತ ರೈತನ ಕುಟುಂಬ ವರ್ಗಕ್ಕೆ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ.ಗಳನ್ನು ವಿತರಿಸಿದರಲ್ಲದೇ, ಶೀಘ್ರವೇ ರಾಜ್ಯ ಸರಕಾರದಿಂದ ದೊರಕುವ 5 ಲಕ್ಷ ರೂ. ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿದರು.

ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News