ಮೇ 23 ರಂದು ಶಿವಮೊಗ್ಗ ಕ್ಷೇತ್ರದಲ್ಲಿ ನಿಷೇಧಾಜ್ಞೆ: ಜಿಲ್ಲಾಧಿಕಾರಿ ದಯಾನಂದ್

Update: 2019-05-20 17:42 GMT

ಶಿವಮೊಗ್ಗ, ಮೇ. 20: ಮತ ಎಣಿಕೆ ಕಾರ್ಯ ನಡೆಯಲಿರುವ ಮೇ 23 ರಂದು ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಕಲಂ 144 ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಮೆರವಣಿಗೆ, ಸಭೆ ಸಮಾರಂಭಗಳು, ವಿಜಯೋತ್ಸವ ಹಾಗೂ ಇತರ ಸಾರ್ವಜನಿಕ ಸಮಾವೇಶಗಳನ್ನು ನಡೆಸುವಂತಿಲ್ಲ. 5 ಹಾಗೂ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವಂತಿಲ್ಲ. ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ಈ ನಿಷೇಧಾಜ್ಞೆ ಮದುವೆ, ಮುಂಜಿ, ಸಂತೆ ಇತ್ಯಾದಿ ಕಾರ್ಯಗಳಿಗೆ ಅನ್ವಯಿಸುವುದಿಲ್ಲ. ನಿಷೇಧಾಜ್ಞೆ ಉಲ್ಲಂಘಿಸುವವರು ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.

ಮದ್ಯ ನಿಷೇಧ: ಮತ ಎಣಿಕೆಯು ಮುಕ್ತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಶಾಂತಿಯುತವಾಗಿ ನಡೆಯಬೇಕೆಂಬ ಸದುದ್ದೇಶದಿಂದ ಹಾಗೂ ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮೇ 22 ರ ಮಧ್ಯರಾತ್ರಿ 12 ರಿಂದ ಮೇ 23 ರ ಮಧ್ಯರಾತ್ರಿ 12 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. 

ಈ ಅವಧಿಯಲ್ಲಿ ಎಲ್ಲಾ ವಿಧದ ಮದ್ಯ ತಯಾರಿಕಾ ಘಟಕಗಳನ್ನು, ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವ ಸಿಎಲ್-2, ಸಿಎಲ್-4, ಸಿಎಲ್-7, ಸಿಎಲ್-8, ಸಿಎಲ್-9 ಮತ್ತು ಸಿಎಲ್-11(ಸಿ),ಸಿಎಲ್-14 ಸನ್ನದು, ವೈನ್ ಟ್ಯಾವರಿನ್, ಬೋಟಿಕ್, ಕೆ.ಎಸ್.ಬಿ.ಸಿ.ಎಲ್., ಡಿಪೋಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಡಿ.ಸಿ.ಯವರು ಆದೇಶದಲ್ಲಿ ತಿಳಿಸಿದ್ದಾರೆ. 

ಈ ದಿನಗಳಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ತರಹದ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News