ರಿಸ್ಯಾಟ್-2ಬಿ ಉಪಗ್ರಹ ಉಡಾವಣೆ ಯಶಸ್ವಿ

Update: 2019-05-22 04:31 GMT

ಶ್ರೀಹರಿಕೋಟಾ: ರಾಡಾರ್ ಇಮೇಜಿಂಗ್ ಭೂ ವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿಯನ್ನು ಇಲ್ಲಿನ ಮೊದಲ ಲಾಂಚ್‌ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾಯಿಸಲಾಗಿದೆ.

ಭಾರತದ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್) ರಾಕೆಟ್ ಮೂಲಕ ಇದನ್ನು ಹಾರಿಬಿಡಲಾಗಿದ್ದು, 15 ನಿಮಿಷಗಳ ಯಾನದ ಬಳಿಕ 615 ಕೆ.ಜಿ. ತೂಕದ ಉಪಗ್ರಹವನ್ನು ಸುಮಾರು 555 ಕಿಲೋಮೀಟರ್ ಕಕ್ಷೆಗೆ ಸೇರಿಸಲಾಗಿದೆ.

ಇಸ್ರೋ ಪ್ರಕಾರ ರಿಸ್ಯಾಟ್-2ಬಿಯ ಬಾಳಿಕೆ ಅವಧಿ ಐದು ವರ್ಷಗಳಾಗಿದ್ದು, ಇದನ್ನು ಕೃಷಿ, ಅರಣ್ಯ ಮತ್ತು ವಿಕೋಪ ನಿರ್ವಹಣೆ ಬೆಂಬಲಕ್ಕಾಗಿ ಬಳಸಲಾಗುತ್ತದೆ. ಆದರೆ ಈ ಉಪಗ್ರಹವನ್ನು ಕಣ್ಗಾವಲು ವ್ಯವಸ್ಥೆಗೂ ಬಳಸಲಾಗುತ್ತದೆ ಎನ್ನಲಾಗುತ್ತಿದ್ದು, ಈ ಆಯಾಮದ ಬಗ್ಗೆ ಇಸ್ರೋ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಮುಖ ವಲಯಗಳಿಂದ ಉಪಗ್ರಹಕ್ಕೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಆರು/ಏಳು ಉಪಗ್ರಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮತ್ತೊಂದು ರಾಡಾರ್ ಇಮೇಜಿಂಗ್ ಉಪಗ್ರಹ 2ಬಿಆರ್1 ಹಾಗೂ ಇತರ ಎರಡು ರಕ್ಷಣಾ ಉಪಗ್ರಹಗಳನ್ನು ಜುಲೈ ಅಥಾ ಆಗಸ್ಟ್‌ನಲ್ಲಿ ಹೊಸ ಚಿಕ್ಕ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ರಾಕೆಟ್‌ನ ಮೂಲಕ ಹಾರಿಸಲು ಉದ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News