ನಾಳೆ ಸಂಜೆ ತನಕ ಹೆಚ್ ಡಿಕೆ ಸಿಎಂ ಆಗಿರುತ್ತಾರೆ: ಡಿವಿಎಸ್

Update: 2019-05-22 12:15 GMT

ಬೆಂಗಳೂರು, ಮೇ 23: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ಮೇ 24ರಂದು ಅವರು ರಾಜೀನಾಮೆ ನೀಡುವ ಮೂಲಕ, ರಾಜ್ಯದಲ್ಲಿ ಹೊಸ ಸರಕಾರ ರಚನೆಗೆ ವೇದಿಕೆ ಸಿದ್ಧವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ಬುಧವಾರ ನಗರದ ವಿಶ್ವೇಶ್ಯರಯ್ಯ ಗೋಪುರದಲ್ಲಿರುವ ತಮ್ಮ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಯಾವ ಯಾವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೋ ಅವರೆಲ್ಲ ತಿರುಗಾಡಲೇಬೇಕು ಎಂದರು.

ಆಂಧ್ರಪದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚಂದ್ರಬಾಬು ನಾಯ್ಡುಗೆ ಬೇರೆ ಯಾವುದೇ ಕೆಲಸವಿಲ್ಲ. ಅವರ ಮನಸ್ಥಿತಿಯೇ, ಕುಮಾರಸ್ವಾಮಿಯಲ್ಲೂ ಇದೆ ಎಂದರು.

ಚಂದ್ರಬಾಬು ನಾಯ್ಡು ತಮ್ಮ ಇಮೇಜ್ ಕಳೆದುಕೊಂಡಿದ್ದು, ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ. ಕುಮಾರಸ್ವಾಮಿ ನಾಳೆ ಸಂಜೆವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ನಾಡಿದ್ದು ಅವರು ರಾಜೀನಾಮೆ ನೀಡಲಿದ್ದಾರೆ. ಅಧಿಕಾರವನ್ನು ಕಳೆದುಕೊಳ್ಳುತ್ತಿರುವವರು ಒಂದು ಕಡೆ ಸೇರಿದ್ದಾರೆ ಎಂದು ಸದಾನಂದ ಗೌಡ ವ್ಯಂಗ್ಯವಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಗ್ಗೆ ಮಾಜಿ ಸಚಿವ ರೋಷನ್ ಬೇಗ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಇವರಿಗೂ ಸಹಿಸಿಕೊಂಡು ಸಾಕಾಗಿದೆ ಎಂದರು.

ನಮ್ಮ ರಾಜ್ಯದಲ್ಲಿ ಆಡಳಿತ ನಡೆಸಿದ ಅತ್ಯಂತ ದುರಹಂಕಾರಿ ಅಂದರೆ ಅದು ಸಿದ್ದರಾಮಯ್ಯ. ದಿನೇಶ್ ಗುಂಡೂರಾವ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಗುಲಾಮ. ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪರಿಸ್ಥಿತಿ ಏನು ಎಂಬುದನ್ನು ರೋಷನ್ ಬೇಗ್ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ, ನಮ್ಮ ಪಕ್ಷದ ಒಬ್ಬ ಶಾಸಕರು ಮಾತ್ರ ಇದ್ದರು. ಉಳಿದ ಎಳು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಹಾಗೂ ಎರಡರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಆದರೂ, ನನಗೆ ಈ ಬಾರಿ ಗೆಲುವಿನ ವಿಶ್ವಾಸವಿದೆ ಎಂದು ಸದಾನಂದಗೌಡ ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೊನೆಯ ಎರಡು ದಿನ ತಮ್ಮ ಎಲ್ಲ ಚಟುವಟಿಕೆಗಳನ್ನು ನಡೆಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಗೆಲುವಿನ ಅಂತರದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಆಗಬಹುದಷ್ಟೇ. ಆದರೆ, ನನ್ನ ಗೆಲುವು ಮಾತ್ರ ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News