ದಾವಣಗೆರೆ: ರೌಡಿಶೀಟರ್ ಹತ್ಯೆ ಪ್ರಕರಣ; 18 ಆರೋಪಿಗಳ ಬಂಧನ

Update: 2019-05-22 12:40 GMT

ದಾವಣಗೆರೆ, ಮೇ 22: ರೌಡಿಶೀಟರ್ ನಾಗರಾಜ್ ಅಲಿಯಾಸ್ ಬುಳ್ಳನಾಗಣ್ಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಕುರಿತು ಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಆರ್. ಚೇತನ್, ಮೇ 11ರಂದು ವಿದ್ಯಾನಗರ ಠಾಣೆ ವ್ಯಾಪ್ತಿಯ ಎಸ್‍ಎಸ್ ಹೈಟೆಕ್ ಆಸ್ಪತ್ರೆ ಹಿಂಭಾಗದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಮುಂಭಾಗ ರೌಡಿಶೀಟರ್ ಬುಳ್ಳಾನಾಗನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡಲು ಎಎಸ್‍ಪಿ ಟಿ.ಜಿ.ಉದೇಶ್, ನಗರ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ನಾಗರಾಜ್ ಮಾರ್ಗದರ್ಶನದಲ್ಲಿ ಸಿಪಿಐ ಆನಂದ್, ಡಿಸಿಐಬಿ ಘಟಕದ ಲಕ್ಷ್ಮಣ್ ನಾಯ್ಕ, ನಗರವೃತ್ತ ನಿರೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. 

ಆರೋಪಿಗಳಾದ ಸಂತೋಷ್ ಕುಮಾರ್, ಪರಶುರಾಮ್, ವಿಜಯನಾಯ್ಕ್, ಪವನ್ ಕುಮಾರ್, ಮಹಾಂತೇಶ್, ನವೀನ್ ಜಿ, ರಾಕೇಶ್ ಪಿ, ಮಂಜುನಾಥ್ ಎಂ, ವಿಜಯ ಎಸ್, ಶಿವಕುಮಾರ್, ಮೈಲಾರಿ ಎ, ರಮೇಶ್, ಮನೋಜ್, ಶ್ರೀನಿವಾಸ್, ಸುಭಾನಿ, ರವಿ, ನೀಲಗಿರಿ, ಪರಮೇಶಿ ಹಾಗೂ ಕೃತ್ಯಕ್ಕೆ ಬಳಸಿದ ಆಯುಧ, ಮೊಬೈಲ್, ವಾಹನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಶೀಘ್ರದಲ್ಲೇ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. 

ರೌಡಿ ನಿಯಂತ್ರಣ ತಂಡ ರಚನೆ
ರೌಡಿ ಶೀಟರ್ ಮತ್ತವರ ಹಿಂಬಾಲಕರನ್ನು ನಿಯಂತ್ರಿಸಲು ಆ್ಯಂಟಿ ರೌಡಿ ಸ್ಕ್ವಾಡ್ ರಚಿಸಿ, ರೌಡಿ ಶೀಟರ್ ಗಳ ಚಲನವಲನಗಳ ಮೇಲೆ ನಿಗಾ ಇಡಲಾಗುವುದು. ರಿಯಲ್ ಎಸ್ಟೇಟ್ ದಂಧೆ, ಸಿವಿಲ್ ವ್ಯಾಜ್ಯ ಪ್ರಕರಣ, ವಾಹನಗಳ ಸೀಜಿಂಗ್, ಮನೆ, ಜಾಗ ಖಾಲಿ ಮಾಡಿಸುವ ಹೀಗೆ ನಾನಾ ಪ್ರಕರಣಗಳಲ್ಲಿ ರೌಡಿಗಳು ಪ್ರವೇಶಿಸುತ್ತಿದ್ದು, ಇಂತಹವರನ್ನು ಮಟ್ಟ ಹಾಕಲು ಇಲಾಖೆ ರೌಡಿ ನಿಗ್ರಹ ಪಡೆ ಶೀಘ್ರವೇ ರಚಿಸಲಿದೆ.
-ಆರ್.ಚೇತನ್, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News