ಇವಿಎಂ ಬಗ್ಗೆ ವಿಪಕ್ಷ ನಾಯಕರ ಸಂಶಯ ಖಂಡನೀಯ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Update: 2019-05-22 13:00 GMT

ಬೆಂಗಳೂರು, ಮೇ 23: ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಇನ್ನಿತರ ನಾಯಕರು ಸಂಶಯ ವ್ಯಕ್ತಪಡಿಸಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳನ್ನು ಈಗಾಗಲೇ ದೇಶದ ಜನತೆ ತಿರಸ್ಕರಿಸಿದ್ದಾರೆ. ವಿನಾಕಾರಣ, ಮತಯಂತ್ರಗಳನ್ನು ಕೇಂದ್ರ ಸರಕಾರ ಹಾಗೂ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆಧಾರರಹಿತ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ಅವರ ಅಸಹಾಯಕತೆ ಮತ್ತು ಹತಾಶೆ ಭಾವನೆ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಹಲವಾರು ಬಾರಿ ಎಲ್ಲ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿ, ಮತಯಂತ್ರಗಳ ಹಾಗೂ ವಿವಿ ಪ್ಯಾಟ್ ಸೇರಿದಂತೆ ಮತಯಂತ್ರಗಳ ಬಗ್ಗೆ ಇರುವ ಸಂಶಯ, ದೂರುಗಳನ್ನು ಚುನಾವಣಾ ಆಯೋಗ ಎಲ್ಲ ಪಕ್ಷಗಳ ಮುಖಂಡರ ಎದುರು ಸಂಶಯಗಳನ್ನು ನಿವಾರಣೆ ಹಾಗೂ ಪ್ರಯೋಗ ಕೂಡ ಮಾಡಿತ್ತು. ಇಷ್ಟಾದರೂ ಈಗ ಮತ್ತೆ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿತ್ತು. ಕಾಂಗ್ರೆಸ್ ನೇತೃತ್ವದ ಸರಕಾರ ಕೆಲವು ಕಡೆ ಈಗಾಗಲೇ ರಚನೆಯಾಗಿದೆ. ಆಗ ಕೂಡ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಇತ್ತು. ಆಗ ಏಕೆ ಕಾಂಗ್ರೆಸ್ ಪಕ್ಷದ ನಾಯಕರು ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಲಿಲ್ಲ ಎಂದು ರವಿಕುಮಾರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತಮ್ಮ ವೈಫಲ್ಯಗಳನ್ನು, ಅಸಹಾಯಕತೆ ಹಾಗೂ ತಮ್ಮ ಕೀಳುಮಟ್ಟದ ರಾಜಕಾರಣವನ್ನು ಮುಚ್ಚಿ ಹಾಕಲು ಈಗ ಮತಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದು ಇಡೀ ದೇಶದ ಜನತೆಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಕೀಯ ಪಕ್ಷಗಳ ನಾಯಕರು ಮತದಾರರ ಅಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು. ಮತಯಂತ್ರಗಳ ಬಗ್ಗೆ ಸಂಶಯ ಪಡುವುದನ್ನು ಬಿಡಬೇಕೆಂದು ರವಿಕುಮಾರ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News