ಕನಿಷ್ಠ 15 ರಲ್ಲಿ ಗೆಲ್ಲದಿದ್ದರೆ ನಾಯಕತ್ವದ ಸಮಸ್ಯೆ ಸಾಬೀತಾಗಲಿದೆ: ಶಾಸಕ ಡಾ.ಕೆ.ಸುಧಾಕರ್

Update: 2019-05-22 14:22 GMT

ಬೆಂಗಳೂರು, ಮೇ 22: ಮತದಾನ ಮಾಡಿದ ಮತದಾರರ ಅಭಿಪ್ರಾಯ ಸಂಗ್ರಹಿಸಿ, ಅವರದ್ದೇ ಆದ ರೀತಿಯಲ್ಲಿ ತಂತ್ರಗಾರಿಕೆ ಉಪಯೋಗಿಸಿಕೊಂಡು, ಚುನಾವಣೋತ್ತರ ಸಮೀಕ್ಷೆ ನಡೆಸಲಾಗುತ್ತದೆ. ಆದರೆ, ಅದೇ ಅಂತಿಮ ಫಲಿತಾಂಶವಲ್ಲ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಭಿಪ್ರಾಯ ಸಂಗ್ರಹಿಸಿ ಚುನಾವಣೋತ್ತರ ಸಮೀಕ್ಷೆ ಕೊಡುತ್ತಾರೆ. ಅದರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ನಾಳೆ ಫಲಿತಾಂಶ ಬಂದ ಮೇಲೆ ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಲಿದೆ ಎಂದರು.

ಗೆದ್ದಾಗ ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಸರಿಯಿರುತ್ತದೆ. ಸೋತಾಗ ಇವಿಎಂ ಸರಿಯಿಲ್ಲ ಅನ್ನುವುದು ನಾವು ಮಾಡುವ ಅವಮಾನ. ಇವಿಎಂ ಬಳಕೆಗೆ ಬಂದ ಬಳಿಕ ನಾವು ಹಲವಾರು ಚುನಾವಣೆಗಳನ್ನು ಎದುರಿಸಿ ಗೆಲುವು ಸಾಧಿಸಿದ್ದೇವೆ. ಭಾರತೀಯ ನಾಗರಿಕರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು ಎಂದು ಸುಧಾಕರ್ ಹೇಳಿದರು.

ಯಾರಿಗಾದರೂ ಇವಿಎಂ ಕುರಿತು ಅನುಮಾನಗಳಿದ್ದರೆ ಅದಕ್ಕೆ ಚುನಾವಣಾ ಆಯೋಗ ಉತ್ತರದಾಯಿಯಾಗಿರುತ್ತದೆ. ವಿರೋಧ ಪಕ್ಷಗಳ ಸಂದೇಹಗಳನ್ನು ದೂರ ಮಾಡುವುದು ಚುನಾವಣಾ ಆಯೋಗದ ಕರ್ತವ್ಯ ಎಂದು ಸುಧಾಕರ್ ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಗ್ಗೆ ಮಾಜಿ ಸಚಿವ ರೋಷನ್ ಬೇಗ್ ಹೇಳಿಕೆ ಕೊಟ್ಟಿರುವುದು ತಪ್ಪು. ಅವರಿಗೆ ಮಂತ್ರಿ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣರಲ್ಲ. ದಿನೇಶ್ ಗುಂಡೂರಾವ್ ಇದೇ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನವೇ ಅವರನ್ನು ಅಸಮರ್ಥ ಎನ್ನುವುದು ತಪ್ಪು ಎಂದು ಸುಧಾಕರ್ ಹೇಳಿದರು.

ಪಕ್ಷದಲ್ಲಿ ಎಲ್ಲ ನಾಯಕರು ಒಂದಾಗಿದ್ದೇವೆ. ಆದರೆ, ಕಾರ್ಯಕರ್ತರು ಒಟ್ಟಾಗಿದ್ದಾರಾ ಅನ್ನೋದು ನಾಳೆ ಫಲಿತಾಂಶ ಬಂದ ಬಳಿಕ ಗೊತ್ತಾಗುತ್ತದೆ. ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಎಂಬುದು ಗೊತ್ತಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

ರಾಜ್ಯದಲ್ಲಿ ಯಾವ ರೀತಿಯಲ್ಲಿ ಬೆಳವಣಿಗೆಗಳು ನಡೆಯಲಿವೆ ಅನ್ನೋದು ಗೊತ್ತಾಗುತ್ತದೆ. ಲೋಕಸಭೆಯ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯ ಸರಕಾರದ ಭವಿಷ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಸುಧಾಕರ್ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರೂ ಸೇರಿ ಚುನಾವಣೆ ಎದುರಿಸಿದ್ದೇವೆ. ಕನಿಷ್ಠ 15ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಅದಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ನಾಯಕತ್ವದಲ್ಲಿ ಏನೋ ಸಮಸ್ಯೆಯಿದೆ, ನಾಯಕತ್ವವನ್ನು ಆಯ್ಕೆ ಮಾಡುವುದರಲ್ಲಿ ನಾವು ಎಡವಿದ್ದೇವೆ ಅನ್ನೋದು ಸಾಬೀತಾಗಲಿದೆ.

-ಸುಧಾಕರ್, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News