ನಾಳೆ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ: ಯಾರ ಕೈಗೆ ಸಿಗಲಿದೆ ದೇಶದ ಚುಕ್ಕಾಣಿ ?

Update: 2019-05-22 14:37 GMT

ಬೆಂಗಳೂರು, ಮೇ 22: ದೇಶದ 542 ಲೋಕಸಭಾ ಕ್ಷೇತ್ರಗಳಿಗೆ 7ಹಂತದಲ್ಲಿ ನಡೆದಿದ್ದ ಚುನಾವಣೆಯ ಫಲಿತಾಂಶ ನಾಳೆ(ಗುರುವಾರ) ಸಂಜೆಯೊಳಗೆ ಪ್ರಕಟವಾಗಲಿದ್ದು, ಮುಂದಿನ ಐದು ವರ್ಷದ ದೇಶದ ಚುಕ್ಕಾಣಿ ಯಾವ ಪಕ್ಷದ ವಶವಾಗಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎಗೆ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆಯಾದರೂ, ಎರಡಕ್ಕೂ ಸೇರದ ಪಕ್ಷೇತರರೆ ನಿರ್ಣಾಯಕ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ. ಇವುಗಳ ನಡುವೆ ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಇಂದು ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ದೇಶದ ಪ್ರಮುಖ ನಾಯಕರಾದ ನರೇಂದ್ರ ಮೋದಿ, ರಾಹುಲ್‌ಗಾಂಧಿ, ಕನ್ನಯ್ಯ ಕುಮಾರ್ ಸೇರಿದಂತೆ ರಾಜ್ಯದ ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಶೋಭಾ ಕರಂದ್ಲಾಜೆಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ರಾಜ್ಯದ ಮತದಾರರಲ್ಲಿ ಮನೆ ಮಾಡಿದೆ.

ಬೆಳಗ್ಗೆ 8ಕ್ಕೆ ದೇಶಾದ್ಯಂತ ಏಕಕಾಲಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಯು ಮಧ್ಯಾಹ್ನ 12ಕ್ಕೆ ಮುಗಿಯುತ್ತದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದನ್ವಯ ಪ್ರತಿ ವಿಧಾನಸಭೆಯ 5 ಮತ ಕೇಂದ್ರಗಳಲ್ಲಿರುವ ವಿವಿ ಪ್ಯಾಟ್‌ಗಳನ್ನು ಎಣಿಕೆ ಮಾಡಿ, ವಿದ್ಯುನ್ಮಾನ ಮತಯಂತ್ರದಲ್ಲಿರುವ ಮತಗಳನ್ನು ತಾಳೆ ಮಾಡಿ ನೋಡಬೇಕಿರುವುದರಿಂದ ನಿಖರವಾದ ಫಲಿತಾಂಶ ಸಂಜೆ 6ರ ನಂತರ ಪ್ರಕಟಗೊಳ್ಳುವ ಸಾಧ್ಯತೆಯಿದೆ.

- ರಾಜ್ಯದಲ್ಲಿ 28 ಲೋಕಸಭಾ ಕೇತ್ರ

- 461ಅಭ್ಯರ್ಥಿಗಳ ಫಲಿತಾಂಶ ಪ್ರಕಟ

- 11 ಸಾವಿರ ಸಿಬ್ಬಂದಿಗಳು ಮತ ಎಣಿಕೆಗೆ ನಿಯೋಜನೆ

- ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭ

- ಸಂಜೆ 6ಕ್ಕೆ ನಿಖರ ಫಲಿತಾಂಶ ಪ್ರಕಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News