ನಿಗದಿಗಿಂತ ಹೆಚ್ಚು ಹಣ ಪಡೆದ ಮಳಿಗೆಗೆ 50 ಸಾವಿರ ದಂಡ ವಿಧಿಸಿದ ಕೋರ್ಟ್ !

Update: 2019-05-22 16:19 GMT

ಬೆಂಗಳೂರು, ಮೇ 22: ಸಾಬೂನಿನ ಗರಿಷ್ಠ ಮಾರಾಟ ಬೆಲೆಗಿಂತ 5 ರೂ. ಹೆಚ್ಚುವರಿ ಪಡೆದಿದ್ದ ಮಳಿಗೆಯೊಂದಕ್ಕೆ ಗ್ರಾಹಕ ನ್ಯಾಯಾಲಯ 50 ಸಾವಿರ ರೂಪಾಯಿಗೂ ಅಧಿಕ ದಂಡ ವಿಧಿಸಿದೆ. 

ಎಂಆರ್‌ಪಿಗಿಂತ ಹೆಚ್ಚು ಹಣ ಪಡೆಯುವ ವ್ಯಾಪಾರಸ್ಥರು, ಮಳಿಗೆಗಳಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಸಾಬೂನಿನ ಎಂಆರ್‌ಪಿ 50 ರೂ. ಇದ್ದರೂ ಬಿಲ್‌ನಲ್ಲಿ 55 ರೂ. ಎಂದು ನಮೂದಿಸಿ 5 ರೂ. ಹೆಚ್ಚುವರಿ ಪಡೆದು ವಂಚಿಸಲಾಗಿದೆ ಎಂದು ಆರೊಪಿಸಿ ಮಂಡ್ಯದ 59 ವರ್ಷದ ಸುರೇಶ್ ಕುಮಾರ್ ಮಂಡ್ಯ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಟಿ.ಶ್ರೀಕಂಠ ಹಾಗೂ ಎಂ.ಕೆ. ಲಲಿತಾ ಅವರಿದ್ದ ಪೀಠ ದೂರಿನ ವಿಚಾರಣೆ ನಡೆಸಿತ್ತು. ನಿಗದಿತ ದರಕ್ಕಿಂತ ಹೆಚ್ಚು ಪಡೆದ ಸೂಪರ್ ಮಾರ್ಕೆಟ್, ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿರುವುದು ಸಾಬೀತಾಗಿದೆ ಎಂದು ಹೇಳಿದೆ.

ದೂರುದಾರರಿಂದ ಪಡೆದಿರುವ ಹೆಚ್ಚುವರಿ 5 ರೂ., ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ 25 ಸಾವಿರ ರೂ. ಹಾಗೂ ವ್ಯಾಜ್ಯದ ವೆಚ್ಚ 2 ಸಾವಿರ ರೂ. ಸೇರಿ ಒಟ್ಟು 27,005 ರೂ.ಗಳನ್ನು ವಾರ್ಷಿಕ ಶೇ. 9 ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದೆ. ದಂಡದ ರೂಪದಲ್ಲಿ 25 ಸಾವಿರ ರೂ.ಗಳನ್ನು ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸುವಂತೆಯೂ ಸೂಪರ್ ಮಾರ್ಕೆಟ್ ವ್ಯವಸ್ಥಾಪಕರಿಗೆ ನಿರ್ದೇಶಿಸಿದೆ.

ವಿಚಾರಣೆಗೆ ಗೈರಾದ ವ್ಯವಸ್ಥಾಪಕ: ಸೂಪರ್ ಮಾರ್ಕೆಟ್ ವ್ಯವಸ್ಥಾಪಕರಿಗೆ ನೋಟಿಸ್ ಜಾರಿಗೊಳಿಸಿ, ಅದನ್ನು ಅವರು ಸ್ವೀಕರಿಸಿದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಏಕಪಕ್ಷೀಯವಾಗಿ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ, ವಿಚಾರಣೆ ಪೂರ್ಣಗೊಳಿಸಿ ಆದೇಶ ನೀಡಿದೆ.

ಕೋರ್ಟ್ ಆದೇಶವೇನು: ದೂರುದಾರರು ರಸೀದಿ, ಲೀಗಲ್ ನೋಟಿಸ್, ಹಾಗೂ ಸಾಬೂನು ಸೇರಿ ಅರ್ಹ ದಾಖಲೆ ಸಲ್ಲಿಸುವುದರೊಂದಿಗೆ ವಂಚನೆಯನ್ನು ಸಾಬೀತುಪಡಿಸಿದ್ದಾರೆ. ವಿಚಾರಣೆಗೆ ಗೈರು ಹಾಜರಾಗಿರುವ ಸೂಪರ್ ಮಾರ್ಕೆಟ್ ವ್ಯವಸ್ಥಾಪಕರು, ತಮ್ಮಿಂದ ಯಾವುದೇ ಸೇವಾ ನ್ಯೂನತೆ ಉಂಟಾಗಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ದೂರುದಾರರಿಗೆ ಪರಿಹಾರ ನೀಡುವ ಹೊಣೆ ಸೂಪರ್ ಮಾರ್ಕೆಟ್ ವ್ಯವಸ್ಥಾಪಕರದ್ದಾಗಿದೆ. ಇದೇ ರೀತಿ ಅನೇಕ ಮುಗ್ಧ ಗ್ರಾಹಕರಿಗೆ ವಂಚಿಸಿರುವುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ ಗ್ರಾಹಕ ಕಲ್ಯಾಣ ನಿಧಿಗೂ ದಂಡ ಪಾವತಿಸಲು ಸೂಪರ್ ಮಾರ್ಕೆಟ್ ಬದ್ಧವಾಗಿದೆ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.

ಪ್ರಕರಣವೇನು: ಮಂಡ್ಯ ಅಶೋಕನಗರ ನಿವಾಸಿ ಸುರೇಶ್ ಕುಮಾರ್ 2017ರ ಜು.30ರಂದು ಅಲ್ಲಿನ ಸೂಪರ್ ಮಾರ್ಕೆಟ್ ಒಂದರಿಂದ 129 ರೂ. ಮೌಲ್ಯದ ಗೃಹ ಬಳಕೆ ವಸ್ತುಗಳನ್ನು ಖರೀದಿಸಿದ್ದರು. ಇದರಲ್ಲಿ ಸಾಬೂನೊಂದಕ್ಕೆ 55 ರೂ. ಪಾವತಿಸಿದ್ದರು. ಮನೆಗೆ ಬಂದು ಪರಿಶೀಲಿಸಿದಾಗ ಎಲ್ಲ ತೆರಿಗೆಗಳೂ ಸೇರಿ ಸಾಬೂನಿನ ಗರಿಷ್ಠ ಮಾರಾಟ ಬೆಲೆ 50 ರೂ. ಎಂದು ನಮೂದಿಸಿದ್ದರೂ, 5 ರೂ. ಹೆಚ್ಚು ಪಡೆದಿರುವುದನ್ನು ಗಮನಿಸಿದ ಸುರೇಶ್ ಕುಮಾರ್, ಆ ಕುರಿತು ಸೂಪರ್ ಮಾರ್ಕೆಟ್ ಸಿಬ್ಬಂದಿಯನ್ನು ವಿಚಾರಿಸಿದ್ದರು. ಆದರೆ, ಸಿಬ್ಬಂದಿ ಅದಕ್ಕೆ ಹಾರಿಕೆಯ ಉತ್ತರ ನೀಡಿದ್ದರು. ಇದನ್ನು ಪ್ರಶ್ನಿಸಿ ಸೂಪರ್ ಮಾರ್ಕೆಟ್‌ಗೆ ನೋಟಿಸ್ ಜಾರಿಗೊಳಿಸಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News