ಆಪರೇಷನ್ ಕಮಲಕ್ಕೆ ತಾತ್ಕಾಲಿಕ ತಡೆ: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ?

Update: 2019-05-22 16:36 GMT

ಬೆಂಗಳೂರು, ಮೇ 22: ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಬಿಂಬಿಸಿರುವ ಬೆನ್ನಲ್ಲೆ, ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಲು ಮುಂದಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ತಾತ್ಕಾಲಿಕ ತಡೆಯೊಡ್ಡಿದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ, ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಪರೇಷನ್ ಕಮಲಕ್ಕೆ ಕೈ ಹಾಕದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ನಾಯಕರ ಲೆಕ್ಕಾಚಾರದಂತೆ ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಪಕ್ಷದ ಕನಿಷ್ಠ 7 ಹಾಗೂ ಜೆಡಿಎಸ್ ಪಕ್ಷದ ಮೂವರು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ಆಪರೇಷನ್ ಕಮಲಕ್ಕೆ ತಾತ್ಕಾಲಿಕ ತಡೆಯೊಡ್ಡಿರುವ ಬಿಜೆಪಿ ಹೈಕಮಾಂಡ್ ನಡೆಯಿಂದ, ಅತೃಪ್ತ ಶಾಸಕರು ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದಾರೆ.

ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರಿದರೆ, ನಂತರ ನಡೆಯುವ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿರುವ ಅನಿವಾರ್ಯತೆಯಿದೆ. ಆ ಸಂದರ್ಭದಲ್ಲಿ ನಮ್ಮ ಲೆಕ್ಕಾಚಾರ ತಪ್ಪಿದರೆ ಏನು ಮಾಡವುದು ಎಂಬ ಆತಂಕವು ಅತೃಪ್ತ ಶಾಸಕರಲ್ಲಿ ಮನೆ ಮಾಡಿದೆ ಎಂದು ತಿಳಿದು ಬಂದಿದೆ.

ಆದಷ್ಟು ಶೀಘ್ರದಲ್ಲೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ಸಾಧ್ಯತೆಗಳಿರುವುದರಿಂದ, ಯಡಿಯೂರಪ್ಪ ಮಾತನ್ನು ನಂಬಿಕೊಂಡು ಬಿಜೆಪಿಗೆ ಹೋಗುವುದಾದರೂ ಹೇಗೆ? ನಮ್ಮ ಮುಂದಿನ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದು ಅತೃಪ್ತ ಶಾಸಕರ ಚಿಂತೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News