ಕೊಡಗಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ

Update: 2019-05-22 16:52 GMT

ಮಡಿಕೇರಿ, ಮೇ 22 : ಮುಂಗಾರಿನ ಆರಂಭಕ್ಕೆ ಮುನ್ಸೂಚನೆ ಎಂಬಂತೆ ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಕೆಲವು ಕಡೆ ಗಾಳಿಮಳೆಗೆ ಮರ ಮತ್ತು ಮರದ ಕೊಂಬೆಗಳು ರಸ್ತೆಗುರುಳಿದ ಘಟನೆ ನಡೆದಿದೆ.  

ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ. ಮಧ್ಯಾಹ್ನದ ವೇಳೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ನಾಪೋಕ್ಲು, ಸೋಮವಾರಪೇಟೆ, ಕುಶಾಲನಗರ, ಕೂಡಿಗೆ, ಸಿದ್ದಾಪುರ ಸೇರಿದತೆ ಮಡಿಕೇರಿ ತಾಲೂಕಿನ ಕೆಲವು ಭಾಗದಲ್ಲಿ ಗಾಳಿ ಸಹಿತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜೂನ್ 4 ರ ವೇಳೆಗೆ ನೈಋತ್ಯ ಮಾರುತಗಳು ಕೇರಳವನ್ನು ಪ್ರವೇಶಿಸಲಿದ್ದು, ಬಳಿಕ ಮೂರು ನಾಲ್ಕು ದಿನಗಳಲ್ಲಿ ಮುಂಗಾರು ಕೊಡಗನ್ನು ಪ್ರವೇಶಿಸುತ್ತದೆ ಎಂದು ಹೇಳಲಾಗಿದೆ. ಈ ಮುನ್ಸೂಚನೆಗಳನ್ನು ಮೀರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಬುಧವಾರ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವಿಭಾಗಗಳಲ್ಲಿ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಯಿಂದ ಮರವೊಂದು ರಸ್ತೆಕ್ಕುರುಳಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನದ ವೇಳೆ ಸುರಿದ ಭಾರೀ ಮಳೆಗೆ ರಸ್ತೆಗಳ ಮೇಲೆಯೇ ನೀರು ಹರಿಯಿತು. ಪಾಲಿಟೆಕ್ನಿಕ್ ಕಾಲೇಜಿನ ಬಳಿ ಮರದ ದೊಡ್ಡ ಕೊಂಬೆಯೊಂದು ರಸ್ತೆಗಡ್ಡ ಉರುಳಿ ಕೆಲವು ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಇದೇ ರೀತಿ ಕೂಡಿಗೆ ವಿಭಾಗದಲ್ಲೂ ಭಾರೀ ಮಳೆಯಾಗಿದ್ದು, ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು.

ಕಾವೇರಿ ನದಿ ಪಾತ್ರದ ನಾಪೋಕ್ಲು ಸುತ್ತಮುತ್ತಲ ಗ್ರಾಮೀಣ ಪ್ರದೇಶ ಮತ್ತು ಸಿದ್ದಾಪುರದಲ್ಲಿ ಉತ್ತಮ ಮಳೆಯಾಗಿದೆ.

ಹಸು ಬಲಿ
ಮಡಿಕೇರಿ ತಾಲೂಕಿನ ಮರಗೋಡು ಬಳಿಯ ಕಟ್ಟೆಮಾಡು ಗ್ರಾಮದ ಅಜ್ಜಂಡ ಉತ್ತಪ್ಪ ಅವರಿಗೆ ಸೇರಿದ ಹಸುವೊಂದು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸುಂಟಿಕೊಪ್ಪ ಸುತ್ತಮುತ್ತಲ್ಲ ಪ್ರದೇಶದಲ್ಲಿ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಸುಡುಬಿಸಿಲಿನ ವಾತಾವರಣಕ್ಕೆ ತಂಪೆರೆದಿದೆ.

ಜಿಲ್ಲೆಯ ವಿವಿಧೆಡೆ ಆಗೊಮ್ಮೆ, ಈಗೊಮ್ಮೆ ಮಳೆಯಾಗುತ್ತಿದೆಯಾದರು, ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ದಟ್ಟವಾಗಿ ಮೋಡ ಕವಿಯುತ್ತಿದೆಯಷ್ಟೆ. ಬಿಸಿಲಿನ ತಾಪಮಾನದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆನ್ನುವ ಆತಂಕದಲ್ಲಿರುವ ನಗರದ ಜನರು ಮಳೆಗಾಗಿ ಎದುರು ನೋಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News