ಸಿಡಿಲ ಬಡಿತಕ್ಕೆ ಹತ್ತು ಆಡುಗಳು ಬಲಿ: ಪ್ರವಾಸಿಗರು ಅಪಾಯದಿಂದ ಪಾರು

Update: 2019-05-22 16:54 GMT

ಮಡಿಕೇರಿ, ಮೇ 22 : ಶಿರಂಗಾಲ ತೊರೆನೂರು ವ್ಯಾಪ್ತಿಯಲ್ಲಿ ಸಿಡಿಲು ಹೊಡೆದ ಪರಿಣಾಮ ಹತ್ತು ಆಡುಗಳು ಬಲಿಯಾದ ಘಟನೆ ನಡೆದಿದೆ.

ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಟಿ.ಸಿ.ರಂಗಸ್ವಾಮಿ ಎಂಬವರಿಗೆ ಸೇರಿದ ಹತ್ತು  ಆಡುಗಳು ಬುಧವಾರ ಸಿಡಿಲಿಗೆ ಬಲಿಯಾಗಿವೆ. ಚಿಕ್ಕನಾಯಕನಹಳ್ಳಿಯ ಟಿ.ಎ.ರಾಮಚಂದ್ರ ಅವರ ಜಮೀನಿನ ಹತ್ತಿರವಿರುವ ಸಣ್ಣ ಮಂಟಿಯ ಹತ್ತಿರ ಮೇಯುತ್ತಿದ್ದ ಆಡುಗಳು ಬಲಿಯಾಗಿದ್ದು, ಜೊತೆಗೆ ಆಡು ಮೇಯಿಸುತ್ತಿದ್ದ ಅವುಗಳ ಮಾಲಕ ರಂಗಸ್ವಾಮಿ ಅವರು ಸಿಡಿಲಿನ ಆಘಾತಕ್ಕೆ ಅಸ್ವಸ್ಥರಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

ಇದನ್ನು ಕಂಡ ಪಕ್ಕದ ಜಮೀನಿನವರು ಸ್ಥಳಕ್ಕಾಗಮಿಸಿ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ರಂಗಸ್ವಾಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡು ಬಡವರಾದ ರಂಗಸ್ವಾಮಿಯವರಿಗೆ ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ತೊರೆನೂರು ಸಹಕಾರ ಬ್ಯಾಂಕಿನ ಅಧ್ಯಕ್ಷ ಟಿ.ಕೆ.ಕೃಷ್ಣೇಗೌಡ ಹಾಗೂ ನಿರ್ದೇಶಕ  ಟಿ.ಕೆ.ಪಾಂಡುರಂಗ ಅವರು ಕಂದಾಯ ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರವಾಸಿಗರು ಪಾರು
ಮತ್ತೊಂದೆಡೆ ಜೋರಾದ ಗಾಳಿಯೊಂದಿಗೆ ಮಳೆಯಾದ ಪರಿಣಾಮ ಮರದ ಕೊಂಬೆಯೊಂದು ಬಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಕುಶಾಲನಗರದ ಪ್ರವಾಸಿತಾಣ ದುಬಾರೆಯಲ್ಲಿ ನಡೆದಿದೆ. ಮಳೆ ಬಂತೆಂದು ಮರದ ಕೆಳಗೆ ಆಶ್ರಯ ಪಡೆದಿದ್ದ ಪ್ರವಾಸಿಗರೊಬ್ಬರು ಅಪಾಯದಿಂದ ಪಾರಾಗಿದ್ದಾರೆ ಮತ್ತು ಅಲ್ಲೇ ನಿಂತಿದ್ದ ವಾಹನಗಳಿಗೂ ಯಾವುದೇ ಹಾನಿಯಾಗಿಲ್ಲ. ಈ ಘಟನೆಯಿಂದ ದುಬಾರೆ ಭಾಗದಲ್ಲಿದ್ದ ಪ್ರವಾಸಿಗರ ದಂಡು ಕ್ಷಣ ಕಾಲ ಆತಂಕಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News