ರಾಜ್ಯದ ಘಟಾನುಘಟಿ ನಾಯಕರಿಗೆ ಹೀನಾಯ ಸೋಲು

Update: 2019-05-23 13:13 GMT

ಬೆಂಗಳೂರು, ಮೇ 23: ‘ಸೋಲಿಲ್ಲದ ಸರದಾರರು’ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ವೀರಪ್ಪ ಮೊಯ್ಲಿ, ಆರ್.ಧೃವನಾರಾಯಣ್ ಸೇರಿದಂತೆ ಘಟಾನುಘಟಿ ನಾಯಕರು ಹೀನಾಯವಾಗಿ ಸೋಲುಕಂಡಿದ್ದಾರೆ.

ಕಲಬುರಗಿ ಕ್ಷೇತ್ರದಲ್ಲಿ ತಮ್ಮ ಶಿಷ್ಯ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ವಿರುದ್ದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ 95,168 ಮತಗಳ ಭಾರೀ ಅಂತರದಿಂದ ಸೋತಿದ್ದಾರೆ. ಹನ್ನೊಂದು ಬಾರಿ ಗೆಲ್ಲುವ ಮೂಲಕ ಸೋಲನ್ನು ಎಂದೂ ಕಾಣದ ಮಲ್ಲಿಕಾರ್ಜುನ ಖರ್ಗೆ ಕೊನೆಗೂ ಸೋತಿದ್ದು, ಮನೆಯ ಹಾದಿಹಿಡಿದಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯ, ಬಿಜೆಪಿಯ ಎಸ್.ಮುನಿಸ್ವಾಮಿ ವಿರುದ್ಧ ಅಖಾಡಕ್ಕಿಳಿದಿದ್ದ ಕೆ.ಎಚ್.ಮುನಿಯಪ್ಪ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನನುಭವಿಸಿದ್ದು, ಏಳು ಬಾರಿ ಗೆದ್ದಿದ್ದ ಕೆ.ಎಚ್.ಮುನಿಯಪ್ಪ ಎಂಟನೆ ಬಾರಿ ಸಂಸತ್ ಪ್ರವೇಶದ ಕನಸು ಭಗ್ನವಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ವಿರುದ್ಧ ಸ್ಪರ್ಧಿಸಿದ್ದ ವೀರಪ್ಪ ಮೊಯ್ಲಿ 1.81ಲಕ್ಷಕ್ಕೂ ಅಧಿಕ ಮತಗಳ ಬಾರಿ ಅಂತರದಿಂದ ಸೋತಿದ್ದು, ಮೂರನೆ ಬಾರಿಗೆ ಲೋಕಸಭೆ ಪ್ರವೇಶಿಸಬೇಕೆಂಬ ವೀರಪ್ಪ ಮೊಯ್ಲಿ ಅಭಿಲಾಷೆ ಈಡೇರಿಲ್ಲ.

ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜಿದ್ದಿಗೆ ಬಿದ್ದು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 12,387 ಮತಗಳಿಂದ ಸೋಲಿಸಿದ್ದಾರೆ.

‘ಲೋಕಸಭೆಯಲ್ಲಿ ಕರ್ನಾಟಕ ರಾಜ್ಯದ ಧ್ವನಿ’ಯಾಗಿಯೇ ಕೆಲಸ ಮಾಡುತ್ತಿದ್ದ ಹಾಗೂ ಹಿರಿಯ ಸಂಸದೀಯಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಐದನೆ ಬಾರಿ ಲೋಕಸಭೆ ಪ್ರವೇಶಿಸುವ ಕನಸು ಸಫಲವಾಗಲಿಲ್ಲ.

ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮೈತ್ರಿ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ, ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ್ ಜೊಲ್ಲೆ ಅವರ ವಿರುದ್ಧ 1.16 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದು, ಮೂರನೆ ಬಾರಿಗೆ ಲೋಕಸಭೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಬಳ್ಳಾರಿ ಉಪ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ವಿ.ಎಸ್. ಉಗ್ರಪ್ಪ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ವಿರುದ್ಧ 55,707 ಮತಗಳ ಅಂತರದಿಂದ ಸೋತಿದ್ದಾರೆ. 

‘ಜನಾದೇಶವನ್ನು ನಾನು ವಿನಮ್ರತೆಯಿಂದ ಒಪ್ಪಿಕೊಂಡು ಗೌರವಿಸತ್ತೇನೆ. ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸಿದ ಭಗವಂತ ಖೂಬಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು’

-ಈಶ್ವರ್ ಬಿ.ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News