ಸೋಲಿನ ಹೊಣೆಯನ್ನು ಹೊರಲೇಬೇಕು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

Update: 2019-05-23 15:33 GMT

ಬೆಂಗಳೂರು, ಮೇ 23: ಚುನಾವಣೆಗಳನ್ನು ನಡೆಸುವುದು ರಾಜಕೀಯ ಪಕ್ಷಗಳೇ ಹೊರತು, ಸರಕಾರವಲ್ಲ. ಆದುದರಿಂದ, ರಾಜ್ಯದಲ್ಲಿ ಜೆಡಿಎಸ್ ಪಕ್ಷದ ನಿರಾಶಾದಾಯಕ ಫಲಿತಾಂಶದ ಹೊಣೆಯನ್ನು ನಾವು ಹೊರಲೇಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆ ಕೊಟ್ಟ ತೀರ್ಪನ್ನು ತಲೆಬಾಗಿ ಒಪ್ಪುತ್ತೇವೆ. ಜೆಡಿಎಸ್ ರಾಜ್ಯಾಧ್ಯಕ್ಷಕ್ಕೆ ರಾಜೀನಾಮೆ ನೀಡುವ ವಿಚಾರದ ಕುರಿತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಚುನಾವಣೆ ಎದುರಿಸಬೇಕಿತ್ತು ಎಂಬುದು ಹಲವರ ಭಾವನೆಯಿದೆ. ಮೈತ್ರಿ ಮಾಡಿಕೊಳ್ಳುವ ಮುನ್ನವೂ ಈ ಸಂಬಂಧ ಚರ್ಚೆ ನಡೆದಿತ್ತು. ಆದರೆ, ಇಲ್ಲಿ ಮೈತ್ರಿ ಸರಕಾರ ಅಧಿಕಾರದಲ್ಲಿದ್ದು, ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಿದರೆ ಸರಿಯಿರುವುದಿಲ್ಲವೆಂದು ಮೈತ್ರಿ ಮುಂದುವರೆಸಲಾಯಿತು ಎಂದು ಅವರು ಹೇಳಿದರು.

ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಂದರ್ಭದಲ್ಲೆ ನಾನು ನನ್ನ ಆರೋಗ್ಯದ ಸಮಸ್ಯೆಯಿಂದಾಗಿ ಬೇಡ ಎಂದಿದ್ದೆ. ಆದರೆ, ಲೋಕಸಭಾ ಚುನಾವಣೆವರೆಗೆ ಮುಂದುವರೆಯುವಂತೆ ವರಿಷ್ಠರು ಸೂಚನೆ ನೀಡಿದ್ದರು. ಈಗ ಚುನಾವಣೆ ಮುಗಿದಿದೆ. ವರಿಷ್ಠರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.

ದೇಶದ ಇತಿಹಾಸದಲ್ಲಿ ಹಲವಾರು ಚುನಾವಣೆಗಳು ನಡೆದಿವೆ. ಸ್ವತಃ ಇಂದಿರಾಗಾಂಧಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಚುನಾವಣೆಯಲ್ಲಿ ಸೋಲು-ಗೆಲುವು ಹೊಸದಲ್ಲ. ಇರುವ ಫಲಿತಾಂಶವನ್ನು ಸ್ವೀಕರಿಸಬೇಕು. ಇದು ಭಾರತ ಹಾಗೂ ಕರ್ನಾಟಕದ ಪಾಲಿಗೆ ಕೊನೆಯ ಚುನಾವಣೆ ಏನಲ್ಲ ಎಂದು ಅವರು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಜನ ಜೆಡಿಎಸ್ ಶಾಸಕರು, ಮೂವರು ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರು ಇದ್ದರೂ, ಮತದಾನ ಮಾಡುವುದು ಮತದಾರರು ಅಲ್ಲವೇ? ಅವರು ಕೊಟ್ಟ ತೀರ್ಮಾನ ಒಪ್ಪಿಕೊಳ್ಳಬೇಕು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ವಿಜಯಶಂಕರ್ ಗೆಲುವಿಗೆ ನಾವು ಶ್ರಮ ಹಾಕಿದೆವು. ಆದರೆ, ಜನರು ವ್ಯತಿರಿಕ್ತ ತೀರ್ಪು ನೀಡಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News