ರಾಜ್ಯದಲ್ಲಿ ಮುಗಿಲು ಮುಟ್ಟಿದ ಬಿಜೆಪಿಯ ಸಂಭ್ರಮಾಚರಣೆ

Update: 2019-05-23 15:58 GMT

ಬೆಂಗಳೂರು, ಮೇ 23: ರಾಜ್ಯದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದ್ದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಪಕ್ಷದ ಬಾವುಟ ಹಿಡಿದು, ಪಕ್ಷದ ಕಚೇರಿ ಎದುರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಿದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ಗೆಲುವು ಖಚಿತವಾಗುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಹೊರಗಡೆ ಬಿಜೆಪಿ ಕಾರ್ಯಕರ್ತರು ಕುಣಿದು, ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಈ ವೇಳೆ ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಗೆಲುವಿನ ಕಡೆಗೆ ಮುಖ ಮಾಡುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಮುಂಭಾಗದಲ್ಲಿ ಅನಂತಕುಮಾರ್ ಹೆಗಡೆಗೆ ಜಯಕಾರ ಹಾಕಿ ಘೋಷಣೆ ಕೂಗಿದರು. ಈ ವೇಳೆ ಭಟ್ಕಳ ಶಾಸಕ ಸುನಿಲ್ ನಾಯ್ಕ್, ಕುಮಟಾ ಶಾಸಕ ದಿನಕರ್ ಶೆಟ್ಟಿ, ಹಳಿಯಾಳ ಮಾಜಿ ಶಾಸಕ ಸುನಿಲ್ ಹೆಗಡೆ ಜಯಕಾರ ಹಾಕಿ, ಗೆಲುವಿನ ಚಿಹ್ನೆ ತೋರಿಸಿ ಸಂಭ್ರಮಪಟ್ಟರು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಬಿಎಸ್‌ವೈ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ ಜೊಲ್ಲೆಗೆ ಭಾರೀ ಮುನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಗುಲಾಲು(ಬಣ್ಣದ ಪುಡಿ) ಎರಚಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಚಿಕ್ಕೋಡಿ ಹಾಗೂ ಅಥಣಿ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಚಿಕ್ಕೋಡಿ ಆರ್.ಡಿ ಕಾಲೇಜು ಎದುರು ಜಮಾವಣೆಗೊಂಡ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ರಾಯಚೂರಿನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮಾನ್ವಿ ಪಟ್ಟಣದಲ್ಲಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವು ಕಾಣುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರು ಬಣ್ಣ ಎರಚಿ ಸಂಭ್ರಮ ಪಟ್ಟರು.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಅವರು ಗೆಲುವಿನ ದಡ ಸೇರುತ್ತಿದ್ದಂತೆಯೇ ಕಮಲ ಕಾರ್ಯಕರ್ರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News