ಇವರು ರಾಜ್ಯದಿಂದ ಸಂಸತ್ತು ಪ್ರವೇಶಿಸಲಿರುವ ಹೊಸ ಮುಖಗಳು

Update: 2019-05-23 16:02 GMT

ಬೆಂಗಳೂರು, ಮೇ 23: ಜಿದ್ದಾಜಿದ್ದಿನ ಕಣವಾಗಿದ್ದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಾದ ಹಾಸನದಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಸುಮಲತಾ ಅಂಬರೀಷ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಕೋಲಾರ ಕ್ಷೇತ್ರದಿಂದ ಎಸ್.ಮುನಿಸ್ವಾಮಿ ಸೇರಿದಂತೆ ಇನ್ನಿತರರು ಸಂಸತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಹಿರಿಯ ನಟ ದಿ.ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ 1.25 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಲಿದ್ದಾರೆ.

ಸೋಲಿಲ್ಲದ ಸರದಾರರು ಎಂದು ಖ್ಯಾತಿ ಹೊಂದಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್.ಮುನಿಯಪ್ಪ ಇದೇ ಮೊದಲ ಬಾರಿಗೆ ಸೋಲಿನ ರುಚಿ ಸವಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯನ್ನು ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹಾಗೂ ಕೆ.ಎಚ್.ಮುನಿಯಪ್ಪರನ್ನು ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿ ಪರಾಭವಗೊಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ತೆರವಾದ ಹಾಸನ ಲೋಕಸಭಾ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು ವಿರುದ್ಧ ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನದಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಂತಿಮ ಹಂತದಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ತೇಜಸ್ವಿ ಸೂರ್ಯ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ಗೆ ಸೋಲುಣಿಸಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ಚಂದ್ರಪ್ಪ ವಿರುದ್ಧ ಗೆಲುವು ಸಾಧಿಸುವ ಮೂಲಕ ವಿಜಯ ಪತಾಕೆ ಹಾರಿಸಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದಿಂದ ಸ್ಪರ್ಧಿಸಿ ನಾರಾಯಣಸ್ವಾಮಿ ಪರಾಭವಗೊಂಡಿದ್ದರು.

ಕಳೆದ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ(ಕಾಂಗ್ರೆಸ್), ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್) ಹಾಗೂ ಬಿ.ಎನ್.ಬಚ್ಚೇಗೌಡ(ಬಿಜೆಪಿ) ಸ್ಪರ್ಧೆಯಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟು, ಬಚ್ಚೇಗೌಡ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು. ಆದರೆ, ಈ ಬಾರಿ ವೀರಪ್ಪ ಮೊಯ್ಲಿಯನ್ನು ಸೋಲಿಸುವ ಮೂಲಕ ಬಚ್ಚೇಗೌಡ ಮೊದಲ ಬಾರಿ ಸಂಸತ್ತು ಪ್ರವೇಶಿಸಲಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಕಾಶ್ ಹುಕ್ಕೇರಿಯನ್ನು ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಗೆಲುವಿನ ನಗೆ ಬೀರಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಳೆದ ಉಪಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರನ್ನು ಈ ಬಾರಿ ಮಣಿಸಿರುವ ಬಿಜೆಪಿಯ ದೇವೇಂದ್ರಪ್ಪ, ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News