ಅದೃಷ್ಟ ಪರೀಕ್ಷೆಗಿಳಿದ ಸಿನಿಮಾ ಸ್ಟಾರ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಭರ್ಜರಿ ಗೆಲುವು

Update: 2019-05-23 16:04 GMT

ಬೆಂಗಳೂರು, ಮೇ 23: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬಿದ್ದಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿನಿಮಾ ಸ್ಟಾರ್‌ಗಳಾದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರ್‌ಸ್ವಾಮಿ ನಡುವಿನ ಜಿದ್ದಾಜಿದ್ದಿ ಫೈಟ್‌ನಲ್ಲಿ ಸುಮಲತಾ ಅವರು ಭಾರೀ ಅಂತರದಿಂದ ನಿಖಿಲ್‌ಕುಮಾರಸ್ವಾಮಿ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯ ಮಾಲೆ ದೊರಕಬಹುದೆಂದು, ಭಾರೀ ಚರ್ಚೆಗಳೆ ನಡೆದಿದ್ದವು. ನಿಖಿಲ್‌ ಕುಮಾರಸ್ವಾಮಿ ಅವರ ಪರವಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಘಟಾನುಘಟಿಗಳೆ ಪ್ರಚಾರ ನಡೆಸಿದ್ದರು. ಅತ್ತ ಸುಮಲತಾ ಪರವಾಗಿ ನಟರಾದ ದರ್ಶನ್, ಯಸ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಇನ್ನಿತರ ಘಟಾನುಘಟಿಗಳು ಪ್ರಚಾರ ನಡೆಸಿದ್ದರು. ಅಲ್ಲದೆ, ಬಿಜೆಪಿ ಕೂಡ ಸುಮಲತಾ ಅವರ ಪರವಾಗಿ ಪರೋಕ್ಷ ಬೆಂಬಲವನ್ನು ವ್ಯಕ್ತಪಡಿಸಿತ್ತು.

ಆದರೆ, ಮತದಾರರು ವಿಜಯದ ಮಾಲೆಯನ್ನು ಸುಮಲತಾ ಅವರಿಗೆ ತೊಡಿಸಿದ್ದಾರೆ. ಇನ್ನು ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಅವರು ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಬಿಜೆಪಿಯ ಹಾಲಿ ಸಂಸದ ಪಿ.ಸಿ.ಮೋಹನ್, ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಹರ್ಷದ್ ಅವರ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಕ್ಷೇತ್ರದ ಮತದಾರರು ಪಿ.ಸಿ.ಮೋಹನ್‌ಗೆ ವಿಜಯದ ಮಾಲೆಯನ್ನು ತೊಡಿಸಿ, ಪ್ರಕಾಶ್‌ರಾಜ್, ರಿಜ್ವಾನ್ ಅರ್ಷದ್ ಅವರನ್ನು ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News