ಚಾಮರಾಜನಗರ ಮೀಸಲು ಕ್ಷೇತ್ರ: ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಗೆ ಪ್ರಯಾಸದ ಗೆಲುವು

Update: 2019-05-23 16:23 GMT

ಚಾಮರಾಜನಗರ: ಐದು ಭಾರಿ ಲೋಕಸಭೆಯನ್ನು ಪ್ರತಿನಿಧಿಸಿ, ಕೇಂದ್ರ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಮೊದಲ ಬಾರಿಗೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

ಎಪ್ರಿಲ್ 18 ರಂದು ನಡೆದ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಕಾರ್ಯಕರ್ತರು ಮತ್ತು ಟಿಕೆಟ್ ಆಕಾಂಕ್ಷಿಗಳ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ.

ನಗರದ ಹೊರ ವಲಯ ಬೇಡರಪುರ ಬಳಿ ಇರುವ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಚಾಮರಾಜನಗರ ಮೀಸಲು ಲೋಕಸಭೆಯ ಮತಗಳ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. ಪ್ರಾರಂಭದಿಂದ ಮುನ್ನಡೆಯ ನಗೆ ಬೀರುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್. ದೃವನಾರಾಯಣ್ 15 ನೇ ಸುತ್ತಿನ ಮತ ಎಣಿಕೆ ತನಕ ಅಂತರ ಕಾಯ್ದುಕೊಂಡಿದ್ದರು. ಬಳಿಕ ನಡೆದ ಮತಗಳ ಏಣಿಕೆಯಲ್ಲಿ ಅಂತರ ಕಡಿಮೆಯಾಗತೊಡಗಿತು. ಆದರೆ ಅಂತಿಮವಾಗಿ ವಿ.ಶ್ರೀನಿವಾಸ್ ಪ್ರಸಾದ್ ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಬಾವುಟ ಹಾರಿಸಿದರು.

ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಆರ್. ದೃವನಾರಾಯಣ್ ಪರಾಭವಗೊಂಡರು. ಮತ ಎಣಿಕೆ ಕೇಂದ್ರ ಬಳಿ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚಾಗಿ ಜಮಾಯಿಸಿದ್ದರು, ಕಾಂಗ್ರೆಸ್ ಅಭ್ಯರ್ಥಿಯ ಸೋಲು ಎಂದು ತಿಳಿಯುತ್ತಿದ್ದಂತೆ ಕಾರ್ಯಕರ್ತರು ಮತ ಏಣಿಕೆ ಕೇಂದ್ರ ಬಳಿಯಿಂದ ತೆರಳಿದರು. ಸಂಜೆಯ ವೇಳೆಗೆ ಬಿಜೆಪಿ ಕಾರ್ಯಕರ್ತರು ಆಗಮಿಸಿ ಸಂಭ್ರಮಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News