ಛಿದ್ರಗೊಂಡ ಕಾಂಗ್ರೆಸ್ ಭದ್ರಕೋಟೆ: ಕೋಲಾರದಲ್ಲಿ ಅರಳಿದ ಕಮಲ

Update: 2019-05-23 16:59 GMT

ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್ ಕೋಟೆ ಛಿದ್ರಗೊಂಡಿದ್ದು, ಕಳೆದ 30 ವರ್ಷಗಳಿಂದ ಕೆ.ಹೆಚ್.ಮುನಿಯಪ್ಪ ಕಟ್ಟಿದ್ದ ಕಾಂಗ್ರೆಸ್ ಕೋಟೆಯನ್ನು ಕೆಡವಿ ಬಿಜೆಪಿ ಬಾವುಟವನ್ನು ಹಾರಿಸಲಾಗಿದೆ. 

ಆಂತರಿಕ ಕಚ್ಚಾಟ ಮತ್ತು ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕರು, ಬಿಜೆಪಿ ಮುಂದೆ ಮಂಡಿ ಊರಿದ್ದಾರೆ. ಮುನಿಯಪ್ಪನವರ ಮೇಲೆ ಇದ್ದ ಸಿಟ್ಟಿನಿಂದಾಗಿ ಕಾಂಗ್ರೆಸ್ ಮುಖಂಡರು ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ದಾರೆ ಎರೆದಿದ್ದಾರೆ. ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. ಇದರಿಂದಾಗಿ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಹಿನ್ನೋಟ ನೋಡಿದಾಗ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ 1951ರಿಂದ ಇದುವರೆಗೂ ನಡೆದ ಎಲ್ಲಾ ಚುನಾವಣೆಗಳಲ್ಲಿ 1984ರಲ್ಲಿ ಹೊರತು ಪಡಿಸಿ ಕಾಂಗ್ರೆಸ್ ಅಭ್ಯರ್ಥಿಗಳು ಸತತವಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಸಾಂಪ್ರದಾಯಿಕ ಭದ್ರಕೋಟೆಯಾಗಿತ್ತು. 1951ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ನೆಹರೂ ಸಚಿವ ಸಂಪುಟದಲ್ಲಿ ಮೊದಲ ಕೃಷಿ ಸಂಸ್ಕರಣ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1951ರಿಂದ 1957ರ ತನಕ ದ್ವಿಸದಸ್ಯತ್ವದ ಕ್ಷೇತ್ರವಾಗಿತ್ತು. 

1962ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಅಧಿಸೂಚನೆ ಹೊರಡಿಸಲಾಯಿತು. ಪರಿಶಿಷ್ಟ ಜಾತಿ ವರ್ಗದ ದೊಡ್ಡ ತಿಮ್ಮಯ್ಯ ಆಯ್ಕೆಯಾದರು.  ಕಾಂಗ್ರೆಸ್‍ನ ಜಿ.ವೈ. ಕೃಷ್ಣಯ್ಯ 1967 ರಿಂದ ಸತತವಾಗಿ 1980ರ ತನಕ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದರು. 1984ರಲ್ಲಿ ಜನ ಪಕ್ಷದ ಡಾ.ವಿ. ವೆಂಕಟೇಶ್ ಕಾಂಗ್ರೆಸ್‍ನ ಜಿ.ವೈ.ಕೃಷ್ಣನ್‍ ರವರನ್ನು ಪರಾಭವಗೊಳಿಸಿ ಆಯ್ಕೆಯಾದರು. 1989ರಲ್ಲಿ ಕಾಂಗ್ರೆಸ್‍ನ ವೈ.ರಾಮಕೃಷ್ಣ ಆಯ್ಕೆಯಾದರು. ಆನಂತರ 1991 ರಿಂದ ಇದುವರೆಗೂ 7 ಬಾರಿ ಹಾಲಿ ಸಂಸತ್ ಸದಸ್ಯ ಕೆ.ಹೆಚ್.ಮುನಿಯಪ್ಪ ಸತತವಾಗಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದಾರೆ. 

ಆದರೆ ಎಂಟನೇ ಬಾರಿಗೆ ಸಂಸತ್ ಪ್ರವೇಶ ಮಾಡಲು ಮುನಿಯಪ್ಪ ವಿಫಲರಾಗಿದ್ದಾರೆ. ಆಂತರಿಕ ಕಚ್ಚಾಟ ಮತ್ತು ಆಡಳಿತ ಪಕ್ಷದ ವಿರೋಧಿ ಅಲೆಯಿಂದಾಗಿ ಬಿಜೆಪಿ ಬಿರುಗಾಳಿಯಿಂದಾಗಿ ಮುನಿಯಪ್ಪ ಮಂಡಿಯೂರಿದ್ದಾರೆ. ಕಾಂಗೆಸ್ ಮುಖಂಡರು ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸಿದ ಕಾರಣ ತೀವ್ರ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.

ಗೆಲುವಿನ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ, ಕಾಂಗ್ರೆಸ್ ದುರಾಡಳಿತಕ್ಕೆ ಬೇಸರಪಟ್ಟು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಗೆ ಪಕ್ಷಾತೀತವಾಗಿ ಬೆಂಬಲ ದೊರೆಯಿತು. ನರೇಂದ್ರ ಮೋದಿಯವರ ಜನಪರ ಆಡಳಿತದಿಂದಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 

ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಬಿಜೆಪಿಯನ್ನು ಬೆಂಬಲಿಸಬೇಕು ಎಂಬುದು ಜನರ ಆಶಯವಾಗಿತ್ತು. ಕೋಲಾರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಜನರು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪನವರ ದುರಾಡಳಿತದಿಂದ ಬೇಸತ್ತು ಅವರ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೆ.ಹೆಚ್.ಮುನಿಯಪ್ಪ ಕಾಂಗ್ರೆಸ್ ಪಕ್ಷವನ್ನು ತಮ್ಮ ಸ್ವಾರ್ಥಕ್ಕಾಗಿ ಸರ್ವ ನಾಶ ಮಾಡಿದ್ದಾರೆ. ಇದುವರೆಗೂ ನಡೆದ ಚುನಾವಣೆಗಳಲ್ಲಿ ಕೆ.ಹೆಚ್.ಮುನಿಯಪ್ಪನವರು ಗಳಿಸಿದ್ದ ಮತಗಳಿಗಿಂತ ಹೆಚ್ಚು ಮತ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗಳಿಸಿದ್ದಾರೆ ಎಂದರು

ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆ ಚಿಂತಾಮಣಿ ಮಾಜಿ ಶಾಸಕ ಡಾ.ಸುಧಾಕರ್, ಮಾಲೂರು ಮಾಜಿ ಶಾಸಕ ಮಂಜುನಾಥ್, ಮುಳಬಾಗಿಲು ಕೊತ್ತೂರು ಮಂಜುನಾಥ್, ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಬಿಜೆಪಿ ವಿಜೇತ ಅಭ್ಯರ್ಥಿಯನ್ನು ಅಭಿನಂದಿಸಿದರು. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ 707863 ಮತಗಳನ್ನು ಗಳಿಸಿದ್ದಾರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಕೆ.ಹೆಚ್.ಮುನಿಯಪ್ಪ 4,98,156 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ 2,09,407 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಎಣಿಕಾ ಕೇಂದ್ರದಿಂದ ಹೊರನಡೆದರು. ಕಣದಲ್ಲಿದ್ದ ಇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಒಟ್ಟು 12 ಮಂದಿ ಅಂತಿಮ ಕಣದಲ್ಲಿದ್ದರು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಕಣದಲ್ಲಿರುವ 10 ಮಂದಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಅಭಿವೃದ್ಧಿ ಕಾಣದೆ ಬೇಸತ್ತ ಮತದಾರರು ಉತ್ತರ ನೀಡಿದ್ದಾರೆ: ಮುನಿಸ್ವಾಮಿ
ಏಳು ಬಾರಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಬಿಜೆಪಿ ಅಭ್ಯರ್ಥಿಯ ಎದುರು ಸೋಲು ಅನುಭವಿಸಿದ್ದಾರೆ. ಈ ಹಿಂದೆ ನಡೆದಿದ್ದ ಚುನಾವಣೆಗಳಲ್ಲಿ ಒಂದು ಬಾರಿ ಹೊರತು ಪಡಿಸಿದರೆ ಸತತವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮುನಿಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಕಳೆದ 28 ವರ್ಷಗಳಿಂದ ಕೋಲಾರ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಾಗದೆ ಹಿಂದುಳಿದಿತ್ತು. ಬೇಸತ್ತ ಮತದಾರರು ಈಗ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ರೈತಪರ ಹೋರಾಟಗಳಿಂದಾಗಿ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂಬುದು ಜನರ ಆಶಯವಾಗಿದೆ. ಇದರಿಂದಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

'ಇವಿಎಂ ಯಂತ್ರಗಳ ದೋಷ ಸೋಲಿಗೆ ಕಾರಣ'
'ಇವಿಎಂ ಮತ ಯಂತ್ರಗಳ ದೋಷವೇ ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಿದೆ. ಇವಿಎಂ ಮತಯಂತ್ರಗಳು ವಿಶ್ವಾಸಾರ್ಹವಾಗಿಲ್ಲ. ಈ ಮೊದಲೇ ಅನುಮಾನ ವ್ಯಕ್ತಪಡಿಸಲಾಗಿತ್ತು ಎಂದು ಹೇಳಿ, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News