ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಬಿಜೆಪಿಯ ಪ್ರತಾಪ್ ಸಿಂಹ ಭರ್ಜರಿ ಗೆಲುವು

Update: 2019-05-23 17:28 GMT

ಮೈಸೂರು,ಮೇ.23: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 1,38,647 ಮತಗಳ ಬಾರೀ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ನಗರದ ಪಡುವಾರಹಳ್ಳಿಯಲ್ಲಿರುವ ಮಹರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆಯಲ್ಲಿ ಪ್ರತಾಪ್ ಸಿಂಹ ವಿಜಯದ ನಗೆ ಬೀರಿದ್ದಾರೆ. ಎರಡನೇ ಬಾರಿಗೆ ಆಯ್ಕೆಯಾಗಿರುವ ಲೋಕಸಭೆ ಪ್ರವೇಶಿಸಲಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರನ್ನು ಬಾರೀ ಮತಗಳ ಅಂತರದಿಂದ ಸೋಲಿಸುವ ಮೂಲಕ ಬಿಜೆಪಿ ನೆಲೆಯನ್ನು ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಗೆ ಪ್ರರಾಂಭವಾದ ಮತ ಎಣಿಕೆಯಲ್ಲಿ ಮೊದಲಿಗೆ ಅಂಚೆ ಮತದಾನ ಎಣಿಕೆ ಮಾಡಲಾಯಿತು. ನಂತರ ಇವಿಎಂ ಎಣಿಕೆಯನ್ನು ಪ್ರಾರಂಭಿಸಲಾಯಿತು. ಪ್ರತಿ ವಿಧಾನಸಭಾ ಕ್ಷೇತ್ರದ ಒಟ್ಟು 10 ಸುತ್ತುಗಳ ಮತ ಎಣಿಕೆ ನಡೆಯಿತು. ಒಟ್ಟಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20 ಸುತ್ತುಗಳ ಎಣಿಕೆ ನಡೆಯಿತು.

ಅಂಚೆ ಮತಗಳ ಎಣಿಕೆಯಲ್ಲೇ ಮುನ್ನಡೆ ಸಾಧಿಸಿದ ಪ್ರತಾಪ್ ಸಿಂಹ ನಂತರ ನಡೆದ ಇವಿಎಂ ಮತಗಳ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದರು. ಸುಮಾರು 8 ಸುತ್ತು ಮುಗಿಯುತ್ತಿದ್ದಂತೆ ತಮ್ಮ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದರು. ಹತ್ತು ಸುತ್ತುಗಳ ಮುಕ್ತಾಯಕ್ಕೆ ಸುಮಾರು 70 ಸಾವಿರ ಮುನ್ನಡೆ ಸಾಧಿಸಿದ್ದರು.

ನಂತರ ನಡೆದ ಸುತ್ತುಗಳಲ್ಲೂ ಮುನ್ನಡೆಯನ್ನೇ ಸಾಧಿಸಿದ ಅವರು, ಒಟ್ಟಾರೆಯಾಗಿ 6,88,974 ಮತಗಳನ್ನು ಪಡೆದರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ 5,50,322 ಮತಗಳನ್ನು ಪಡದರು. ಒಟ್ಟಾರೆ 1,38,647 ಮಗಳ ಅಂತರದಿಂದ ಪ್ರತಾಪ್ ಸಿಂಹ ಜಯಗಳಿಸಿದರು.
ನಂತರ ವಿಜಯಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಗಳೂ ಆದ ಅಭಿರಾಮ್ ಜಿ.ಶಂಕರ್ ಅವರು ಪ್ರಮಾಣ ಪತ್ರ ವಿತರಿಸಿದರು.

ಮತಗಳ ಎಣಿಕೆ ಕೇಂದ್ರದಿಂದ ಹೊರನಡೆದ ವಿಜಯಶಂಕರ್: ತಮ್ಮ ಸೂಲಿನ ಸೂಚನೆ ತಿಳಿಯುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು. 

ಮಧ್ಯಾಹ್ನ 12.30 ಗಂಟೆ ಸಮಯಕ್ಕೆ ಹತ್ತು ಸುತ್ತುಗಳ ಎಣಿಕೆ ಮುಕ್ತಾಯಗೊಂಡಿತ್ತು. ಈ ನಡುವೆ ಪ್ರತಾಪ್ ಸಿಂಹ ಬಾರೀ ಅಂತರ ಕಾಯ್ದುಕೊಂಡಿದ್ದರು. ಸೋಲಿನ ಸೂಚನೆ ತಿಳಿಯುತ್ತಿದ್ದಂತೆ ಹತಾಶರಾದಂತೆ ಕಂಡ ಅವರು ಕಾರು ಹತ್ತಿ ಹೊರಟರು.

ಕೇಂದ್ರ ಸಚಿವನಾಗುವ ಆಸೆ ಇಲ್ಲ: ಸಂಸದ ಪ್ರತಾಪ್ ಸಿಂಹ
ನಾನು ಯಾರು ಯಾವ ತಂದೆ-ತಾಯಿಯ ಮಗ ಎಲ್ಲಿಯವನು ಎಂದು ತಿಳಿಯದೆ ಮೈಸೂರು-ಕೊಡಗಿನ ಜನತೆ ಕಳೆದ ಬಾರಿ ಗೆಲ್ಲಿಸಿದ್ದರು. ಈಗ ಮತ್ತೊಮ್ಮೆ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮತ ಎಣಿಕೆ ಕೇಂದ್ರದ ಆವರಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾರು ಎಲ್ಲಿಯವನು ಎಂಬುದನ್ನು ನೋಡದೆ ಮೈಸೂರಿನ ಜನತೆ ನನ್ನನ್ನು ಲೋಕಸಭೆಗೆ ಆಯ್ಕೆಮಾಡಿದ್ದಾರೆ. ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.

ನಾನು ಈ ಹಿಂದೆ ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಮೈಸೂರು-ಕೊಡಗು ನಗರಗಳು ಮತ್ತು ಗ್ರಾಮೀಣ ಪ್ರದೇಶಕ್ಕೆ ಆಗಬೇಕಿರುವ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡುತ್ತೇನೆ. ನರೇಂದ್ರ ಮೋದಿ ಅವರ ಜಯಪ್ರಿಯತೆ ನಾನು ಮಾಡಿರುವ ಕೆಲಸ ಮತ್ತು ಬಿಜೆಪಿ ಪಕ್ಷ ನೋಡಿ ಜನ ಮತ ನೀಡಿದ್ದಾರೆ ಅವರಿಗೆ ನಾನು ಚಿರಋಣಿ ಎಂದರು.

ನಾನು ಮಂತ್ರಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿಲ್ಲ, ನನ್ನನ್ನು ಆಯ್ಕೆಮಾಡಿರುವ ಜನರ ಋಣ ತೀರಿಸಬೇಕಿದೆ. ಹಾಗಾಗಿ ಆ ಕಡೆ ಹೆಚ್ಚು ಗಮನ ಹರಿಸಿ ಅವರ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News