ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಸೋಲು

Update: 2019-05-23 18:02 GMT

ತುಮಕೂರು,ಮೇ 23: ಮಾಜಿ ಪ್ರಧಾನಿಯೊಬ್ಬರ ಸ್ಪರ್ಧೆಯಿಂದ ಇಡೀ ದೇಶದಲ್ಲಿಯೇ ಪ್ರತಿಷ್ಠೆಯ ಕಣವಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಒಕ್ಕಲಿಗರ ನಾಯಕ ಎಂದು ಕರೆಯುವ ಹೆಚ್.ಡಿ.ದೇವೇಗೌಡರನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜು 13339 ಮತಗಳ ಅಂತರದಿಂದ ಸೋಲಿಸುವ ಮೂಲಕ ಐದನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಹಾಲಿ ಸಂಸದ ಕಾಂಗ್ರೆಸ್‍ನ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ, ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಹೆಚ್.ಡಿ. ದೇವೇಗೌಡರಿಗೆ ಬಿಜೆಪಿ ಶಾಸಕರಿರುವ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮತ್ತು ಕಾಂಗ್ರೆಸ್ ಶಾಸಕರಿರುವ ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಮತಗಳು ಲಭಿಸಿದರೆ, ಜೆಡಿಎಸ್ ಶಾಸಕರೇ ಇರುವ ಮಧುಗಿರಿ, ಗುಬ್ಬಿ, ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ತೀವ್ರ ಹಿನ್ನೆಡೆಯಾಗಿದ್ದು, ದೊಡ್ಡಗೌಡರ ಸೋಲಿಗೆ ಪ್ರಮುಖ ಕಾರಣವಾಗಿದೆ.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬಿಜೆಪಿಯ ಶಾಸಕರಿರುವ ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ 82,174 ಮತ ಪಡೆದರೆ, ಬಿಜೆಪಿ 75186 ಮತಗಳನ್ನು ಪಡೆದಿದೆ. ಮೈತ್ರಿ ಸರಕಾರದ ಉಪಮುಖ್ಯಮಂತ್ರಿಯಾದ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ಗೆ 77120 ಮತಗಳು ಬಂದರೆ, ಬಿಜೆಪಿಗೆ 72857 ಮತಗಳು ಬಂದಿವೆ. ಬಿಜೆಪಿ ಶಾಸಕರಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 74861 ಮತ ಪಡೆದರೆ, ಬಿಜೆಪಿ 85247 ಮತ ಪಡೆದಿದೆ.

ಜೆಡಿಎಸ್ ಪಕ್ಷದ ಶಾಸಕರಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ 75110 ಮತ ಪಡೆದರೆ, ಬಿಜೆಪಿ 83152 ಮತಗಳನ್ನು ಪಡೆದಿದೆ. ಬಿಜೆಪಿ ಶಾಸಕರಿರುವ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 63480 ಮತ ಪಡೆದರೆ, ಬಿಜೆಪಿ 75534 ಮತ ಪಡೆದಿದೆ. ಮೈತ್ರಿ ಸರಕಾರದ ಸಚಿವರಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 68444 ಮತಗಳು ಬಂದರೆ, ಬಿಜೆಪಿ 70790 ಮತಗಳನ್ನು ಪಡೆದಿದೆ. ಬಿಜೆಪಿ ಶಾಸಕರಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 75918 ಮತ ಪಡೆದರೆ, ಬಿಜೆಪಿ 56944 ಮತ ಪಡೆದಿದೆ. ಒಟ್ಟಾರೆ ಜೆಡಿಎಸ್ 582788 ಮತಗಳನ್ನು ಪಡೆದರೆ, ಬಿಜೆಪಿ 596127 ಮತಗಳನ್ನು ಪಡೆದು, 13339 ಮತಗಳಿಂದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರು ಸೋಲನ್ನಪ್ಪಿದ್ದಾರೆ.

ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎಸ್.ಬಸವರಾಜು, ನನ್ನ ಗೆಲುವಿಗೆ ದೇವೇಗೌಡರ ಒಣ ಪ್ರತಿಷ್ಠೆ ಮತ್ತು ಕಾರ್ಯಕರ್ತರ ಅವಿರತ ಶ್ರಮ ಕಾರಣವಾಗಿದೆ. ತಮ್ಮ ಮೊಮ್ಮಗನಿಗೆ ರಾಜಕೀಯ ಜೀವನ ನೀಡಲು ಹೋಗಿ, ಅತಿಯಾದ ಆತ್ಮವಿಶ್ವಾಸದಿಂದ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದೇ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದರು.

ವೈಯುಕ್ತಿಕವಾಗಿ ದೇವೇಗೌಡರ ಮೇಲೆ ನನಗೆ ಆಪಾರ ಗೌರವವಿದೆ. ಅವರು, ನಾನು ಒಂದೇ ಬಾರಿಗೆ ರಾಜಕೀಯ ಪ್ರವೇಶಿಸಿದವರು. ಮುಖ್ಯಮಂತ್ರಿ, ಪ್ರಧಾನಮಂತ್ರಿಯಂತಹ ಹುದ್ದೆಯಲ್ಲಿ ಕೆಲಸ ಮಾಡಿದವರು. ತುಮಕೂರು ಕ್ಷೇತ್ರದ ಮತದಾರರು ಜಾತಿ ಲೆಕ್ಕಾಚಾರದಲ್ಲಿ ನನಗೆ ಮತ ನೀಡುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ, ಸ್ಪರ್ಧಿಸಿದ್ದು ಅವರಿಗೆ ಮುಳುವಾಯಿತು. ಜನರ ನಿರೀಕ್ಷೆಯನ್ನು ಹುಸಿಗೊಳಿಸದೆ ಕೆಲಸ ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News