ಸೋಲಿನ ಹೊಣೆ ಹೊರುತ್ತೇನೆ: ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್

Update: 2019-05-24 15:08 GMT

ಬಾಗಲಕೋಟೆ, ಮೇ 24: ಲೋಕಸಭಾ ಚುನಾವಣೆಯಲ್ಲಿ ಜನರ ತೀರ್ಮಾನಕ್ಕೆ ತಲೆ ಬಾಗಿದ್ದೇನೆ. ನನ್ನ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಸೋಲಿನಿಂದ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡಬಾರದು. ಮತ್ತೆ ಪಕ್ಷ ಸಂಘಟನೆ ಮಾಡಿ, ಮುಂದಿನ ಬಾರಿ ಗೆಲ್ಲಲು ಪ್ರಯತ್ನಿಸೋಣ. ಚುನಾವಣೆಯಲ್ಲಿ ಜಾತಿರಾಜಕಾರಣ ನಡೆದಿಲ್ಲ. ಹಾಗೆ ನಡೆದಿದ್ದರೆ ನಾನು 4 ಲಕ್ಷಕ್ಕೂ ಅಧಿಕ ಮತ ಪಡೆಯುತ್ತಿರಲಿಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಕಾಂಗ್ರೆಸ್ ಸೋಲುತ್ತದೆ ಎಂದು ಊಹಿಸಿರಲಿಲ್ಲ. ಸ್ವತಃ ಬಿಜೆಪಿ ಕೂಡ ಊಹಿಸಿರಲಿಲ್ಲ. ಸೋಲಿನ ಹೊಣೆಯನ್ನು ನಾನು ಹಾಗೂ ನನ್ನ ಪತ್ನಿ ವೀಣಾ ಕಾಶಪ್ಪನವರ್ ಹೊರುತ್ತೇವೆ. ಇಡೀ ರಾಷ್ಟ್ರದಲ್ಲಿ ಇಂತಹ ಫಲಿತಾಂಶ ಬಂದಿರುವ ಬಗ್ಗೆ ಸಂದೇಹವಿದೆ ಎಂದರು.

ನಮಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು, ಗೆಲುವಿಗಾಗಿ ಜಿಲ್ಲೆಯ ನಾಯಕರು ಎಲ್ಲರೂ ಹಗಲಿರುಳು ದುಡಿದಿದ್ದಾರೆ, ಅವರಿಗೆಲ್ಲ ನಮ್ಮ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮತ್ತೆ ಪಕ್ಷ ಸಂಘಟನೆ ಮಾಡಿ ಸೋಲನ್ನೇ ಗೆಲುವಿನ ಸೋಪಾನ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News