ಲೋಕಸಭಾ ಚುನಾವಣೆ: ರಾಜ್ಯದಿಂದ ಗೆದ್ದವರಲ್ಲಿ 9 ಲಿಂಗಾಯತರು, 7 ಒಕ್ಕಲಿಗರು

Update: 2019-05-24 16:20 GMT

ಬೆಂಗಳೂರು, ಮೇ 24: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 25 ಬಿಜೆಪಿ, 1 ಕಾಂಗ್ರೆಸ್, 1 ಜೆಡಿಎಸ್ ಹಾಗೂ 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಇವರಲ್ಲಿ 9 ವೀರಶೈವ-ಲಿಂಗಾಯತ ಹಾಗೂ 7 ಒಕ್ಕಲಿಗ ಸಮುದಾಯವರೇ ಇದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದವರ ಪೈಕಿ ವೀರಶೈವ -ಲಿಂಗಾಯತ ಜಾತಿಗೆ ಸೇರಿದ ಅಭ್ಯರ್ಥಿಗಳೇ ಅಗ್ರಸ್ಥಾನ ಪಡೆದಿದ್ದು, ವೀರಶೈವ -ಲಿಂಗಾಯತ ಅಭ್ಯರ್ಥಿಗಳ ನಂತರ ಒಕ್ಕಲಿಗ ಅಭ್ಯರ್ಥಿಗಳು 7 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ, ಉಳಿದ 5 ಕ್ಷೇತ್ರದಲ್ಲಿ ಎಸ್ಸಿ ಅಭ್ಯರ್ಥಿಗಳು, 2 ಕ್ಷೇತ್ರಗಳಲ್ಲಿ ಎಸ್ಟಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಶೋಭಾಕರಂದ್ಲಾಜೆ, ಡಿ.ಸದಾನಂದಗೌಡ, ಬಚ್ಚೇಗೌಡ, ಪ್ರತಾಪ್ ಸಿಂಹ ಬಿಜೆಪಿಯಿಂದ ಗೆದ್ದ ಒಕ್ಕಲಿಗರಾದರೆ, ಕಾಂಗ್ರೆಸ್‌ನಿಂದ ಗೆದ್ದಿರುವ ಡಿ.ಕೆ.ಸುರೇಶ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹಾಗೂ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಸೇರಿ ಮೂವರು ಒಕ್ಕಲಿಗರಾಗಿದ್ದಾರೆ.

ಸುರೇಶ್ ಅಂಗಡಿ, ಅಣ್ಣಾ ಸಾಹೇಬ್ ಜೊಲ್ಲೆ, ಜಿ.ಎಂ.ಸಿದ್ದೇಶ್ವರ್, ಕರಡಿ ಸಂಗಣ್ಣ, ಬಿ.ವೈ.ರಾಘವೇಂದ್ರ, ಜಿ.ಎಸ್.ಬಸವರಾಜು, ಭಗವಂತ ಖೂಬಾ, ಶಿವಕುಮಾರ್ ಉದಾಸಿ ಹಾಗೂ ಪಿ.ಸಿ.ಗದ್ದಿಗೌಡರ್ ವೀರಶೈವ ಲಿಂಗಾಯತರಾಗಿದ್ದಾರೆ.

ಬ್ರಾಹ್ಮಣರಲ್ಲಿ ಪ್ರಹ್ಲಾದ್ ಜೋಷಿ, ತೇಜಸ್ವಿ ಸೂರ್ಯ ಹಾಗೂ ಅನಂತ್ ಕುಮಾರ್ ಹೆಗಡೆ ಸೇರಿದ್ದರೆ, ಎ.ನಾರಾಯಣಸ್ವಾಮಿ, ಡಾ.ಉಮೇಶ್ ಜಾಧವ್, ಎಸ್.ಮುನಿಸ್ವಾಮಿ, ಶ್ರೀನಿವಾಸ್ ಪ್ರಸಾದ್, ರಮೇಶ್ ಜಿಗಜಿಣಗಿ ಪರಿಶಿಷ್ಟ ಜಾತಿಗೆ ಸೇರಿದವರು, ರಾಜಾ ಅಮರೇಶ್ವರ ನಾಯಕ್ ಹಾಗೂ ದೇವೇಂದ್ರಪ್ಪ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಇನ್ನು ನಳೀನ್ ಕುಮಾರ್ ಕಟೀಲ್ ಹಾಗೂ ಪಿ.ಸಿ. ಮೋಹನ್ ಓಬಿಸಿಗೆ ಸೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News