ಬಳ್ಳಾರಿಯ ದೇವರಂತಹ ಮತದಾರರ ವಿಶ್ವಾಸ ಗಳಿಸಲು ಆಗಲಿಲ್ಲ: ವಿ.ಎಸ್.ಉಗ್ರಪ್ಪ

Update: 2019-05-24 16:29 GMT

ಬಳ್ಳಾರಿ, ಮೇ 24: ಬಳ್ಳಾರಿಯ ಮತದಾರರು ಮುಗ್ಧರು, ದೇವರಂಥವರು, ಬಹಳ ಒಳ್ಳೆಯವರು. ಆದರೆ, ಸಾಕಷ್ಟು ಕೆಲಸ ಮಾಡಿದರೂ ಅವರ ವಿಶ್ವಾಸವನ್ನು ಗಳಿಸಲು ಆಗಲಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ವಿಷಾದಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾಕೆ ಸೋತೆ ಎಂಬುದು ಸಾವಿರ ಡಾಲರ್ ಪ್ರಶ್ನೆ. ಉತ್ತರ ಸಿಕ್ಕಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೂ ಜನರ ವಿಶ್ವಾಸ ಗಳಿಸಲು ಆಗಲಿಲ್ಲ ಎಂಬ ನೋವು ಇದೆ ಎಂದು ಹೇಳಿದರು.

ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು. ನನಗೆ ಕಡಿಮೆ ಮತಗಳೇನೂ ದೊರಕಿಲ್ಲ. 5,60,681 ಮತಗಳು ದೊರಕಿವೆ. ನನ್ನನ್ನು ನಂಬಿದ ಆ ಮತದಾರರಷ್ಟೇ ಅಲ್ಲದೇ ಇಡೀ ಕ್ಷೇತ್ರದ ಮತದಾರರ ಹಿತ ಕಾಪಾಡಬೇಕು. ಸೋತೆನೆಂದು ಬೇರೆಲ್ಲಿಗೂ ಹೋಗುವುದಿಲ್ಲ. ನನ್ನ ಕರ್ಮ ಭೂಮಿ ಬಳ್ಳಾರಿಯೇ ಹೊರತು. ಬೆಂಗಳೂರೋ, ಪಾವಗಡವೋ, ತುಮಕೂರೋ ಖಂಡಿತಾ ಅಲ್ಲ ಎಂದು ಹೇಳಿದರು. ಪಕ್ಷ ಹೇಳಿದಂತೆ ಸ್ಪರ್ಧಿಸಿದ್ದೆ. ಪಕ್ಷವು ಮನೆಗೆ ಹೋಗು ಎಂದರೆ ಹೋಗುವೆ. ಕೆಲಸ ಮಾಡು ಎಂದರೆ ಮಾಡುವೆ. ಸದ್ಯಕ್ಕೆ ಕ್ಷೇತ್ರದಲ್ಲಿದ್ದುಕೊಂಡೇ ರಾಜಕಾರಣ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವೆ ಎಂದರು. ಸರಿಯೋ, ತಪ್ಪೋ ಸರ್ವಾಧಿಕಾರದ ಮೋದಿಗೆ ಇಡೀ ದೇಶವೇ ಬೆಂಬಲ ನೀಡಿದೆ. ಜನ ಅವರನ್ನು ಮೆಚ್ಚಿದ್ದಾರೋ, ಬೇರೆ ರೀತಿಯಲ್ಲಿ ಮತ ಗಳಿಸಿದ್ದಾರೋ ಗೊತ್ತಿಲ್ಲ. ಅವರ ಪಕ್ಷದ ಮುಖಂಡರೆ ಅವರನ್ನು ಟೀಕಿಸಿದರು. ಜನಾದೇಶವನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು. 

ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸುವೆ

ಇದು ನನ್ನ ಗೆಲುವಲ್ಲ. ಪಕ್ಷದ ಹಾಗೂ ಮತದಾರರ ಗೆಲುವು. ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಉಗ್ರಪ್ಪ ಅವರನ್ನು ಗೆಲ್ಲಿಸಿದ್ದ ಮತದಾರರು ಸೋಲನ್ನೂ ತೋರಿಸಿದ್ದಾರೆ. ನಾನೊಬ್ಬ ರೈತನ ಮಗ, ನನ್ನನ್ನು ಆಯ್ಕೆ ಮಾಡಿರುವ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸುವೆ. ಪ್ರಧಾನ ಮಂತ್ರಿ ಕೈಹಿಡಿದು ಹೆಚ್ಚಿನ ಅನುದಾನ ತಂದು ನಾನು ಜನರ ಸಂಸದ ಎಂಬುದನ್ನು ಸಾಬೀತು ಮಾಡುವೆ.

-ದೇವೇಂದ್ರಪ್ಪ, ಬಳ್ಳಾರಿ ಕ್ಷೇತ್ರದಿಂದ ಬಿಜೆಪಿಯಿಂದ ಗೆಲುವು ಕಂಡ ಸಂಸದ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News