ಮೈಸೂರು: ಧಾರಾಕಾರ ಮಳೆಗೆ ಧರೆಗುರುಳಿದ ಮರಗಳು; ದ್ವಿಚಕ್ರ ವಾಹನ, ಕಾರುಗಳು ಜಖಂ

Update: 2019-05-24 17:06 GMT

ಮೈಸೂರು,ಮೇ 24: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಮರಗಳು ಧರೆಗುರುಳಿದ ಪರಿಣಾಮ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ಕಾರುಗಳು ಜಖಂಗೊಂಡು ಜನಜೀವನ ಅಸ್ವಸ್ಥಗೊಂಡ ಘಟನೆ ನಡೆಯಿತು.

ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದ್ದು, ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಮಳೆಯ ಜೊತೆಗೆ ರಭಸವಾಗಿ ಗಾಳಿ ಬೀಸಿದ್ದರಿಂದ ನಗರದ ವಿವಿಧೆಡೆ ಹತ್ತಾರು ಮರಗಳು ಹಾಗೂ ರೆಂಬೆ-ಕೊಂಬೆಗಳು ಮುರಿದು ಬಿದ್ದಿದ್ದು, 20ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಹಾಗೂ ಐದು ಕಾರುಗಳು ಜಖಂಗೊಂಡಿವೆ. 

ಗಾಳಿಗೆ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಯ ಮಾರ್ಗದ ಮೇಲೆ ಬಿದ್ದ ಪರಿಣಾಂ ನಗರದ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಚಾಮರಾಜಪುರಂನ ಜಯಲಕ್ಷ್ಮಿ ರಸ್ತೆಯಲ್ಲಿ 5, ಚಾಮರಾಜ ಬುಲೇವಾರ್ಡ್ ರಸ್ತೆಯಲ್ಲಿ 2, ಮಹಾರಾಜ ಕಾಲೇಜು ರಸ್ತೆಯಲ್ಲಿ ಒಂದು ರಾಮಸ್ವಾಮಿ ವೃತ್ತದಲ್ಲಿ 2, ಚಾಮರಾಜ ಡಬ್ಬಲ್ ರಸ್ತೆಯಲ್ಲಿ 3, ದೇವರಾಜ ಅರಸು ರಸ್ತೆ ಸಮೀಪ, ನಳಪಾಕ್ ಹೋಟೆಲ್ ಎದುರು ಒಂದು ಮರ, ಧನ್ವಂತರಿ ರಸ್ತೆಯ ಅರೋಮಾ ಬೇಕರಿ ಎದುರು ಒಂದು ಮರದ ಕೊಂಬೆಗಳು ಮುರಿದು ಬಿದ್ದಿದ್ದು, 20ಕ್ಕೂ ಹೆಚ್ಚು ದ್ವಿಚಕ್ರವಾಹನಗಳು, ಐದು ಕಾರುಗಳು ಜಖಂಗೊಂಡಿವೆ. ಸರಸ್ವತಿಪುರಂನ ನ್ಯೂ ಕಾಂತ್ ರಾಜ್ ಅರಸ್ ರಸ್ತೆಯಲ್ಲಿ 2 ಮರಗಳು, ಜಿಲ್ಲಾ ನ್ಯಾಯಾಧೀಶರ ವಸತಿ ನಿಲಯದ ಬಳಿ ಒಂದು ಮರ ಹಾಗೂ ಕುವೆಂಪು ರಸ್ತೆಯ ಬಂದಂತಮ್ಮ ಕಾಳಮ್ಮ ದೇವಸ್ಥಾನದ ರಸ್ತೆಯಲ್ಲಿ ಎಂಟು ಮರಗಳು ಮುರಿದು ಬಿದ್ದಿದ್ದು, ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿವೆ.

48ನೇ ವಾರ್ಡ್ ನ ಚಿನ್ನಗಿರಿ ಕೊಪ್ಪಲಿನಲ್ಲಿ ಎರಡು ಮನೆಗಳ ಮೇಲ್ಛಾವಣಿ ಗಾಳಿಯ ರಭಸಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಗರದ 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರ, ಕೊಂಬೆ ಬಿದ್ದ ಹಿನ್ನಲೆಯಲ್ಲಿ 6 ತಂಡಗಳ ಮೂಲಕ ತೆರವು ಕಾರ್ಯಾಚರಣೆ ನಡೆದಿದೆ. ಪಾಲಿಕೆಯ ಅಭಯ ಸಿಬ್ಬಂದಿ ಜೊತೆ ಹೊರಗಿನ ಕೆಲಸಗಾರರನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಗರಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯ ಕಾರ್ಯಪಾಲಕ ಇಂಜಿನಿಯರ್ ಸದಾಶಿವ ಕೆ.ಜಟ್ನಿ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿದೆ.

ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಮೈಸೂರಿನಲ್ಲಿ ಒಣಗಿದ ಮರ ತೆರವಿಗೆ ಅರಣ್ಯ ಇಲಾಖೆ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಶಕ್ತಿಮಾನ್ ಯಂತ್ರ ಬಳಸಿ ಮರ ಕಟಾವು ಮಾಡಲಾಗಿತ್ತು. ನಗರಪಾಲಿಕೆಯಲ್ಲಿ ಮರ ಕಟಾವಿಗೆ ಕೇವಲ 2 ವಾಹನವಿದ್ದು, ಹೆಚ್ಚುವರಿ 4 ವಾಹನಗಳಿಗೆ ಆಯುಕ್ತರಲ್ಲಿ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮರಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯಪಾಲಕ ಎಂಜಿನಿಯರಿಂಗ್ ಸದಾಶಿವ ಕೆ.ಜಟ್ನಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News