ಮದ್ದೂರು: ಗುಂಪುಗಳ ನಡುವೆ ಘರ್ಷಣೆ; ಇಬ್ಬರಿಗೆ ಗಾಯ

Update: 2019-05-24 18:07 GMT

ಮಂಡ್ಯ, ಮೇ 24: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆದ್ದ ಹಿನ್ನೆಲೆಯಲ್ಲಿ ಹಾಗೂ ಅಕ್ರಮ ಮರಳುಗಾರಿಕೆ ಸಂಬಂಧವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಕೂಳಗೆರೆ ಗೇಟ್ ಬಳಿ ಗ್ರಾಮದಲ್ಲಿ ನಡೆದಿದೆ.

ಕೂಳಗೆರೆ ಗ್ರಾಮದ ತಿಮ್ಮೇಗೌಡರ ಮಗ ಸಾರಿಗೆ ಬಸ್ ನಿರ್ವಾಹಕ ಕುಮಾರ್ ಹಾಗೂ ಅರೆತಿಪ್ಪೂರು ಗ್ರಾಮದ ವೆಂಕಟೇಗೌಡ ಮಗ ವಿ.ಶಶಿಧರ್ ಹಲ್ಲೆಗೊಳಗಾದವರು. ಇವರು ಮದ್ದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಕೂಳಗೆರೆ ಗೇಟ್ ಬಳಿ ಕಾಂಗ್ರೆಸ್ ಮುಖಂಡ ಯೋಗಾನಂದ ಅವರು ಕುಳಿತಿದ್ದಾಗ ಅಲ್ಲಿಗೆ ಆಗಮಿಸಿದ ಜೆಡಿಎಸ್ ಮುಖಂಡರಾದ ಅಭಿಷೇಕ್, ಅರುಣ್, ನವೀನ್, ಕುಲದೀಪ, ಪ್ರದೀಪ್ ಹಾಗೂ ಹೊನ್ನಪ್ಪ ಅವರು, ಸುಮಲತಾ ಅವರನ್ನು ಗೆಲ್ಲಿಸಿದ್ದೀರಿ, ಮರಳುಗಾರಿಕೆ ಎಂದು ತಗಾದೆ ತೆಗೆದಾಗ ಜಗಳ ಶುರುವಾಗಿದೆ. ಆಗ ಮಧ್ಯಪ್ರವೇಶ ಮಾಡಿದ ಕುಮಾರ್ ಮೇಲೆ ಜೆಡಿಎಸ್ ಮುಖಂಡರು ಹಲ್ಲೆ ಮಾಡಿದರು ಎನ್ನಲಾಗಿದೆ.

ಸ್ವಲ್ಪ ಸಮಯದ ನಂತರ ಸುಮಲತಾ ಪರವಾಗಿ ಕೆಲಸ ಮಾಡಿದ್ದೀಯ ಎಂದು ಅರೆತಿಪ್ಪೂರು ಗ್ರಾಮದ ಶಶಿಧರ್ ಅವರಿಗೆ ಪ್ರದೀಪ್, ಅರಣ್ ಹಾಗೂ ಕುಲದೀಪ್ ಅವರು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದರು ಎಂದು ತಿಳಿದು ಬಂದಿದೆ. ಯೋಗಾನಂದ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿ, ಬೈಕ್ ಜಖಂಗೊಳಿಸಿದ್ದಾರೆ ಎಂದೂ ವರದಿಯಾಗಿದೆ.

ಘಟನೆ ಹಿನ್ನೆಲೆಯಲ್ಲಿ ಕೂಳಗೆರೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮದ್ದೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News