ಭೂಕಂಪನದ ಸುದ್ದಿ ಸುಳ್ಳು: ಕೊಡಗು ಜಿಲ್ಲಾಡಳಿತ ಸ್ಪಷ್ಟನೆ

Update: 2019-05-24 18:11 GMT

ಮಡಿಕೇರಿ, ಮೇ 24 : ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಲಘು ಭೂಕಂಪನ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಕೊಡಗು ಜಿಲ್ಲಾಡಳಿತ ಈ ಸುದ್ದಿಯನ್ನು ದಾಖಲೆ ಸಹಿತ ತಳ್ಳಿಹಾಕಿದೆ. 

ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಕೊಡಗು ಜಿಲ್ಲಾಡಳಿತ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿ ಈ ಕುರಿತು ಸ್ಪಷ್ಟನೆ ಬಯಸಿತ್ತು. ಈ ಹಿನ್ನಲೆಯಲ್ಲಿ ಲಘು ಭೂಕಂಪನದ ಕುರಿತು ಸ್ಪಷ್ಟನೆ ನೀಡಿರುವ ಬೆಂಗಳೂರಿನಲ್ಲಿರುವ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಅವರು, ಕೊಡಗು ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿರುವ ಬಗ್ಗೆ ರಾಜ್ಯದ 14 ಭೂಕಂಪನ ಮಾಪಕ ಕೇಂದ್ರದಲ್ಲಿ ಯಾವುದೇ ಅಂಕಿ ಅಂಶಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಹಾರಂಗಿ ಜಲಾಶಯದಲ್ಲಿರುವ ಮಾಪಕದಲ್ಲೂ ಈ ಬಗ್ಗೆ ಯಾವುದೇ ಅಂಕಿ ಅಂಶಗಳು ದಾಖಲಾಗಿಲ್ಲ. ಜಿಲ್ಲೆಯ ಪ್ರತಿ ಗ್ರಾಮದ ಹವಾಮಾನವನ್ನು ಗಮನಿಸಲಾಗುತ್ತಿದ್ದು, ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಮಾತ್ರವಲ್ಲದೇ, 1 ಮ್ಯಾಗ್ನಟ್ಯೂಡ್‍ಗಿಂತ ಕಡಿಮೆ ಪ್ರಮಾಣದ ಲಘು ಭೂಕಂಪನ ಸಂಭವಿಸಿದರೆ ಅದರಿಂದ ಯಾವುದೇ ಅಪಾಯವಿಲ್ಲ ಎಂದು ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಸ್ಪಷ್ಟನೆ ನೀಡಿದೆ.

ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೆಡೆಗಳಲ್ಲಿ ಲಘು ಭೂಕಂಪನವಾಗಿದೆ ಎನ್ನುವ ಊಹಾಪೋಹಗಳನ್ನು ಅಲ್ಲಗಳೆದಿರುವ  ಕರ್ನಾಟಕ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಮಾನಿಟರಿಂಗ್ ಸೆಂಟರ್(ಕೆಎಸ್‍ಎನ್‍ಡಿಎಂಸಿ), ಈ ಸಂಬಂಧ ಯಾವುದೇ ದತ್ತಾಂಶ ದಾಖಲಾಗಿಲ್ಲವೆಂದು ಸ್ಪಷ್ಟಪಡಿಸಿದೆ.

ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ವಿಭಾಗದಲ್ಲಿ ಗುರುವಾರ ಸಂಜೆ ಗುಡುಗಿನ ಶಬ್ದದೊಂದಿಗೆ ಲಘ ಭೂ ಕಂಪನವಾಗಿದೆ ಎನ್ನುವ ಊಹಾಪೋಹಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಡಿ ಒಂದಷ್ಟು ಆತಂಕವನ್ನು ಹುಟ್ಟು ಹಾಕಿತ್ತು.

ಈ ಸಂಬಂಧ ಕೆಎಸ್‍ಎನ್‍ಡಿಎಂಸಿಯ ಡಾ. ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರು ಕೊಡಗು ಜಿಲ್ಲಾಡಳಿತಕ್ಕೆ ನೀಡಿರುವ ಸ್ಪಷ್ಟೀಕರಣದಂತೆ, ಲಘು ಭೂ ಕಂಪನಕ್ಕೆ ಸಂಬಂಧಿಸಿದಂತೆ ವಿ-ಸ್ಯಾಟ್‍ನ ಅನೇಬಲ್ಡ್ ಪಿಎಸ್‍ಎಂಎಸ್ ನೆಟ್ ವರ್ಕ್‍ನಲ್ಲಿ ಯಾವುದೇ ಸಣ್ಣ ಪ್ರಮಾಣದ ದತ್ತಾಂಶವು ದಾಖಲಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News