ಬಿಜೆಪಿಗೆ ಸವಾಲಾದ ದಕ್ಷಿಣ ಭಾರತ

Update: 2019-05-25 08:33 GMT

ಈ ಬಾರಿ ಮೋದಿ ರಾಜಕೀಯ ತಂತ್ರಗಾರಿಕೆಗೆ ಪ್ರತಿರೋಧಗಳನ್ನು ಒಡ್ಡಿದ್ದು ‘ಪ್ರಾದೇಶಿಕತೆ ’ ಎನ್ನುವ ಅಂಶವನ್ನು ನಾವು ಗಮನಿಸಬೇಕು. ಯಾವೆಲ್ಲ ರಾಜ್ಯಗಳು ತನ್ನೆಲ್ಲ ಸಂಸ್ಕೃತಿ, ಭಾಷೆ, ಅಸ್ಮಿತೆಗಳ ಜೊತೆಗೆ ಬದುಕುತ್ತಿವೆಯೋ ಆ ರಾಜ್ಯಗಳನ್ನು ಗೆಲ್ಲಲು ಮೋದಿಗೆ ಕಷ್ಟವಾಗಿದೆ. ಉತ್ತರ ಭಾರತದ ಹಿಂದಿ ರಾಜ್ಯಗಳ ನಡುವೆ ತನ್ನ ಪ್ರಾದೇಶಿಕ ಅಸ್ಮಿತೆಯನ್ನು ಎತ್ತಿ ಹಿಡಿದು ಅವುಗಳಿಗೆ ಪ್ರತಿರೋಧಗಳನ್ನು ಒಡ್ಡುತ್ತಲೇ ಬಂದ ಪಂಜಾಬ್‌ನಲ್ಲಿ ಬಿಜೆಪಿಯ ಹಿಂದುತ್ವ ರಾಜಕಾರಣ ಅಥವಾ ಇನ್ನಿತರ ಭಾವನಾತ್ಮಕ ರಾಜಕಾರಣ ತನ್ನ ಪರಿಣಾಮವನ್ನು ಬೀರಿಲ್ಲ. ಅಲ್ಲಿ ಕಾಂಗ್ರೆಸ್ ಎಂಟು ಸ್ಥಾನಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪಂಜಾಬ್ ಹೊರತುಪಡಿಸಿದರೆ ಹಿಂದಿ ರಾಜ್ಯಗಳ ರಾಜಕಾರಣವನ್ನು ಪ್ರಬಲವಾಗಿ ಎದುರಿಸಿದ್ದು ದಕ್ಷಿಣದ ರಾಜ್ಯಗಳು.

ಮುಖ್ಯವಾಗಿ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ತಮಿಳುನಾಡಿನಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳ ನಡುವೆ ಬಿರುಕು ತಂದು, ಎಐಡಿಎಂಕೆ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿದರೂ ಅಲ್ಲಿನ ಜನರು ಬಿಜೆಪಿಯನ್ನು ಸ್ವೀಕರಿಸಲಿಲ್ಲ. ಆಂಧ್ರದಲ್ಲೂ ಇದೇ ಸ್ಥಿತಿ ನಿರ್ಮಾಣವಾಯಿತು. ಕೇರಳದಲ್ಲಿ ಎಲ್ಲರೂ ಅಚ್ಚರಿ ಪಡುವಂತೆ ಕಾಂಗ್ರೆಸ್ ಅಭೂತಪೂರ್ವ ಜಯವನ್ನು ತನ್ನದಾಗಿಸಿತು. ಕರ್ನಾಟಕ ಮಾತ್ರ ಬಿಜೆಪಿಗೆ ತನ್ನನ್ನು ಸಂಪೂರ್ಣ ಒಪ್ಪಿಸಿಕೊಂಡಿತು. ಕರ್ನಾಟಕದಲ್ಲಿ ಪ್ರಾದೇಶಿಕ ಅಸ್ಮಿತೆಗಳು ನಿಧಾನಕ್ಕೆ ನಾಶವಾಗುತ್ತಿರುವುದನ್ನು ಇದು ಹೇಳುತ್ತಿದೆ. ಇಂದು ಜೆಡಿಎಸ್ ಪ್ರಾದೇಶಿಕ ಪಕ್ಷದಂತೆ ನಟಿಸುತ್ತಿದೆಯೇ ಹೊರತು, ಅದು ಈ ನೆಲದ ಭಾಷೆ, ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತಿಲ್ಲ. ಜೊತೆಗೆ ಕರ್ನಾಟಕವನ್ನು ನಿಧಾನಕ್ಕೆ ಹಿಂದಿ ತನ್ನ ಕೈವಶ ಮಾಡಿಕೊಳ್ಳುತ್ತಿದೆ. ವೈದಿಕ ಸಂಸ್ಕೃತಿ ಕನ್ನಡ ಸಂಸ್ಕೃತಿಯನ್ನು ಈಗಾಗಲೇ ಭಾಗಶಃ ಆಹುತಿತೆಗೆದುಕೊಂಡಿದೆ.

ಹೇಗೆ ತಮಿಳು ನಾಡನ್ನು ದ್ರಾವಿಡ ಚಿಂತನೆಗಳ ಕಾವು ಇನ್ನೂ ಕಾಪಾಡುತ್ತಿದೆಯೋ ಹಾಗೆಯೇ ಕರ್ನಾಟಕವನ್ನು 12ನೇ ಶತಮಾನದ ಶರಣರ ಕ್ರಾಂತಿ ಕಾಪಾಡಬೇಕಾಗಿತ್ತು. ಆದರೆ ಇಡೀ ಶರಣ ಚಿಂತನೆ ವೈದಿಕ ಚಿಂತನೆಗಳ ಜೊತೆಗೆ ಕಲಸು ಮೇಲೋಗರಗೊಂಡು ಲಿಂಗಾಯತರು ತಮ್ಮ ಅಸ್ಮಿತೆಯ ಕುರಿತಂತೆ ಗೊಂದಲದ ಸ್ಥಿತಿಯಲ್ಲಿದ್ದಾರೆ. ಲಿಂಗಾಯತರ ಈ ಗೊಂದಲಗಳನ್ನು ಸಂಘಪರಿವಾರ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ವಿಚ್ಛಿದ್ರಕಾರಿ ಶಕ್ತಿಗಳು ಕರ್ನಾಟಕದ ಸೂಫಿ ಚಿಂತನೆಗಳನ್ನೂ ಬಿಡದೆ ನಾಶ ಪಡಿಸುವಲ್ಲಿ ಬಹುತೇಕ ಯಶಸ್ವಿಯಾಗಿವೆ. ಸದ್ಯಕ್ಕೆ ಕರ್ನಾಟಕದಲ್ಲಿ ಸಂಘಪರಿವಾರದ ಹಿಂದುತ್ವದ ರಾಜಕೀಯಕ್ಕೆ ಪ್ರತಿರೋಧಗಳನ್ನು ಒಡ್ಡುತ್ತಿರುವುದು ಇಲ್ಲಿನ ಪ್ರಬಲ ಜಾತಿಗಳು ಮಾತ್ರ. ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯಗಳು ಒಂದು ಜಾತಿಯಾಗಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುವುದರಿಂದ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಭೇದಿಸಲು ಸಂಘಪರಿವಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಜಾತಿ, ಮಠಗಳನ್ನೇ ಬಳಸಿಕೊಂಡು ನಿಧಾನಕ್ಕೆ ಒಬ್ಬೊಬ್ಬ ಜಾತಿ ನಾಯಕನನ್ನು ಅದು ಬಲಿ ಹಾಕುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದರೂ ಜೆಡಿಎಸ್ ನಾಯಕರಾದ ಗೌಡರ ಕುಟುಂಬ ತಮ್ಮ ಮೆದುಳನ್ನು ಯಜ್ಞ ಯಾಗಾದಿಗಳಿಗೆ ಸಂಪೂರ್ಣ ಒತ್ತೆಯಿಟ್ಟಿರುವುದನ್ನು ಇಲ್ಲಿ ಗಮನಿಸಬೇಕು. ಬಹುಶಃ ಈ ಎಲ್ಲ ದೌರ್ಬಲ್ಯಗಳನ್ನು ಬಳಸಿಕೊಂಡು ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಬಿಜೆಪಿ ಕರ್ನಾಟಕವನ್ನು ಆರಿಸಿಕೊಂಡಿತು. ಕನ್ನಡ ಅಸ್ಮಿತೆಯ ಮೇಲೆ ಹಿಂದುತ್ವ ಮತ್ತು ಹಿಂದಿ ಅಸ್ಮಿತೆಯನ್ನು ಹೇರುವಲ್ಲಿ ಅದು ಈಗಾಗಲೇ ಬಹಳಷ್ಟು ಯಶ ಕಂಡಿದೆ.

 ಕೇರಳದ ಮಟ್ಟಿಗೆ ತುಸು ಭಿನ್ನ ಬೆಳವಣಿಗೆಗಳು ನಡೆಯುತ್ತಿವೆ. ಕೇರಳವು ಜಾತಿ ಸಂಘರ್ಷದ ಕುಲುಮೆಯಿಂದ ಮೇಲೆದ್ದು ನಿಂತ ನೆಲ. ನಂಬೂದಿರಿಗಳ ಜಾತಿ ದೌರ್ಜನ್ಯಗಳ ವಿರುದ್ಧ ನಾರಾಯಣಗುರುಗಳಂತಹ ನಾಯಕರ ಸುದೀರ್ಘ ಹೋರಾಟ ಅಲ್ಲಿಯ ಜನಜೀವನದ ಮೇಲೆ ಗಾಢ ಪರಿಣಾಮ ಬೀರಿದೆ. ಈ ಜಾತಿ ಸಂಘರ್ಷ ನಿಧಾನಕ್ಕೆ ಕೇರಳದಲ್ಲಿ ವರ್ಗ ಸಂಘರ್ಷದ ರೂಪ ಪಡೆಯಿತು. ಕೇರಳದಲ್ಲಿ ತಾಂಡವವಾಡುತ್ತಿರುವ ಜಾತೀಯತೆಯ ಪರಾಕಾಷ್ಠೆಯನ್ನು ಕಂಡು ಸ್ವಾಮಿ ವಿವೇಕಾನಂದರು ಕೇರಳವನ್ನು ‘ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ಆ ಹುಚ್ಚಾಸ್ಪತ್ರೆಗೆ ಔಷಧಿಯಾಗಿ ಕಮ್ಯುನಿಸ್ಟ್ ಚಳವಳಿ ಸಾಕಷ್ಟು ಕೆಲಸ ಮಾಡಿತು. ಒಂದೆಡೆ ಹಿಂದೂ ಧರ್ಮದೊಳಗಿಂದಲೇ ಬಂಡೆದ್ದ ಕ್ರಾಂತಿಕಾರಿಗಳು, ಇನ್ನೊಂದೆಡೆ ಎಲ್ಲ ಧರ್ಮಗಳನ್ನು ನಿರಾಕರಿಸಿ ಜಮೀನ್ದಾರರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಕಮ್ಯುನಿಸ್ಟ್ ಕ್ರಾಂತಿಕಾರಿಗಳು, ಇದೇ ಸಂದರ್ಭದಲ್ಲಿ ಜಾತೀಯತೆಯ ವಿರುದ್ಧ ಪ್ರತಿಭಟನೆಯಾಗಿ ನಡೆದ ಕೆಳಜಾತಿಯ ಮತಾಂತರಗಳು ಕೇರಳವನ್ನು ರೂಪಿಸಿದ ಬಗೆ ಅನನ್ಯವಾದುದು. ಆ ಅನನ್ಯತೆಯೇ ಇಂದು ಸಂಘಪರಿವಾರದಿಂದ ಕೇರಳವನ್ನು ರಕ್ಷಿಸಿದೆ. ಹಿಂಸೆಯ ಮೂಲಕ ಮತ್ತೆ ಕೇರಳವನ್ನು ಪ್ರವೇಶಿಸಲು ಸಂಘಪರಿವಾರ ಶಕ್ತಿ ಮೀರಿ ಪ್ರಯತ್ನಿಸುತ್ತಿವೆಯಾದರೂ ಕೇರಳದ ಜಾಗೃತ ನಾಗರಿಕರು ಅದನ್ನು ಅಷ್ಟೇ ತೀವ್ರವಾಗಿ ಪ್ರತಿರೋಧಿಸುತ್ತಿದ್ದಾರೆ. ಸಂಘಪರಿವಾರ ಎರಡು ರೀತಿಯ ತಂತ್ರಗಾರಿಕೆಯ ಮೂಲಕ ಕೇರಳವನ್ನು ಪ್ರವೇಶಿಸಲು ಯತ್ನಿಸುತ್ತಿದೆ.

ಒಂದು, ನಾರಾಯಣ ಗುರುಗಳ ಹೋರಾಟವನ್ನು ಹೈಜಾಕ್ ಮಾಡಿ, ಆ ಪೀಠವನ್ನು ನಿಧಾನಕ್ಕೆ ವೈದಿಕೀಕರಣಗೊಳಿಸುವುದು. ಶಬರಿಮಲೆಯಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ವಿವಾದಗಳನ್ನು ಸೃಷ್ಟಿಸಿ ಆಮೂಲಕ ಹಿಂದುತ್ವದ ಜಾಗೃತಿಯನ್ನು ಮೂಡಿಸುವುದು. ಇನ್ನೊಂದೆಡೆ ಕಮ್ಯುನಿಸ್ಟ್ ಪಕ್ಷವನ್ನು ದುರ್ಬಲಗೊಳಿಸುವುದು ಅವರ ಮುಖ್ಯ ಅಜೆಂಡಾವಾಗಿದೆ. ಎಲ್ಲಿಯವರೆಗೆ ಸೈದ್ಧಾಂತಿಕ ಬದ್ಧತೆಯುಳ್ಳ ಯುವಕರು ಮತ್ತು ನಾಯಕರಿಂದ ರೂಪುಗೊಂಡ ಕಮ್ಯುನಿಸ್ಟ್ ಪಕ್ಷ ದುರ್ಬಲಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಬಿಜೆಪಿ ಕೇರಳದೊಳಗೆ ಬೇರಿಳಿಸುವುದು ಕಷ್ಟ. ಇದೀಗ ರಾಹುಲ್ ಗಾಂಧಿಯವರು ವಯನಾಡ್‌ನಲ್ಲಿ ಸ್ಪರ್ಧಿಸಿದ ಪರಿಣಾವೋ, ರಾಜ್ಯ ಸರಕಾರದ ಮೇಲಿರುವ ಅಸಮಾಧಾನವೋ ಲೋಕಸಭೆಯಲ್ಲಿ ಬಹುತೇಕ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಆದರೆ ಕಾಂಗ್ರೆಸ್‌ನಿಂದ ಈ ಸ್ಥಾನಗಳು ಬಿಜೆಪಿಗೆ ವರ್ಗಾವಣೆಯಾಗುವುದು ಅತಿ ಸುಲಭ. ಯಾಕೆಂದರೆ ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕಾಗಿ ರಾಜಕೀಯ ಮಾಡುತ್ತಿದೆಯೇ ಹೊರತು, ಒಂದು ನಿರ್ದಿಷ್ಟವಾದ ಸಿದ್ಧಾಂತವನ್ನು, ಮೌಲ್ಯಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅಲ್ಲ. ಕೇರಳದ ಫಲಿತಾಂಶ ಭವಿಷ್ಯದಲ್ಲಿ ಬಿಜೆಪಿಗೆ ಮತ್ತು ಸಂಘಪರಿವಾರಕ್ಕೆ ಅನುಕೂಲವಾಗಲಿದೆ.

ಕಾಂಗ್ರೆಸ್‌ನ್ನು ಬಳಸಿಕೊಂಡೇ ಮುಂದಿನ ದಿನಗಳಲ್ಲಿ ಬಿಜೆಪಿ ಕೇರಳದಲ್ಲಿ ಬೆಳೆಯುವ ಅಪಾಯವಿದೆ. ಒಟ್ಟಿನಲ್ಲಿ ಕರ್ನಾಟಕ ಹೊರತು ಪಡಿಸಿ ದಕ್ಷಿಣ ಭಾರತ ಈ ಬಾರಿಯೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಆದರೆ ಅದು ಸುಲಭದಲ್ಲಿ ಸೋಲೊಪ್ಪುವುದು ಕಷ್ಟ. ಬಲಿ ಚಕ್ರವರ್ತಿಯನ್ನು ಮಟ್ಟ ಹಾಕಲು ವೇಷ ಮರೆಸಿ ಬಂದಂತೆ, ಉತ್ತರದ ನಾಯಕರು ಬೇರೆ ಬೇರೆ ವೇಷಗಳಲ್ಲಿ ದಕ್ಷಿಣ ಭಾರತವನ್ನು ಪ್ರವೇಶಿಸಲಿದ್ದಾರೆ. ಈ ನಿಟ್ಟಿನಲ್ಲಿ ತಮಿಳಿನಲ್ಲಿ ದ್ರಾವಿಡ ವಿಚಾರಧಾರೆಗಳು, ಕೇರಳದಲ್ಲಿ ಕ್ರಾಂತಿಕಾರಿ ಚಿಂತನೆಗಳು, ಕರ್ನಾಟಕದಲ್ಲಿ ಶರಣರ, ಸೂಫಿ ಸಂತರ ಮೌಲ್ಯಗಳು ಮತ್ತೆ ಬಲವಾಗಬೇಕಾಗಿದೆ. ಅವರು ಯಾವ ವೇಷದಲ್ಲಿ ಬಂದರೂ ಗುರುತಿಸಿ, ಸಮರ್ಥವಾಗಿ ಅವರನ್ನು ಎದುರಿಸುವ ಬಲವನ್ನು ಈ ಮೂಲಕ ಪಡೆದುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News