ವರಿಷ್ಠರ ಸ್ವಹಿತಾಸಕ್ತಿಗೆ ಕಾಂಗ್ರೆಸ್ ಬಲಿಯಾಗಿದೆ: ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ

Update: 2019-05-25 11:56 GMT

ಚಿಕ್ಕಮಗಳೂರು, ಮೇ 25: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ಇಂತಹ ಪರಿಸ್ಥಿತಿ ಐತಿಹಾಸಿಕ ಪಕ್ಷವೊಂದಕ್ಕೆ ಬರಬರದಾಗಿತ್ತು. ಹಿಂದೆಂದೂ ಇಂತಹ ಪರಿಸ್ಥಿತಿ ಪಕ್ಷಕ್ಕೆ ಬಂದಿರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‍ನ ಹೀನಾಯ ಸೋಲಿಗೆ ರಾಜ್ಯ ನಾಯಕರ ಸ್ವಯಂಕೃತ ಅಪರಾಧವೇ ಕಾರಣ ಎಂದು ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರದೇವಿ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠರು ಹಾಗೂ ರಾಷ್ಟ್ರ ಮಟ್ಟದ ನಾಯಕರು, ಪಕ್ಷದ ಹಿರಿಯ ನಾಯಕರನ್ನು, ನಿಷ್ಠಾವಂತ ಕಾರ್ಯಕರ್ತರು ಹಾಗೂ ಜನರನ್ನು ಗಮನಕ್ಕೆ ತಗೆದುಕೊಳ್ಳದೇ ತಾವು ನಡೆದದ್ದೇ ಹಾದಿ ಎನ್ನುವಂತೆ ವರ್ತಿಸಿದ್ದಾರೆ. ತಮ್ಮ ಹಿತಾಸಕ್ತಿಗೆ ಪಕ್ಷವನ್ನು ಬಳಸಿಕೊಂಡಿದ್ದರಿಂದ ಪಕ್ಷ ಹೀನಾಯ ಸ್ಥಿತಿಗೆ ಬರಲು ಕಾರಣವಾಯಿತು. ತಾವು ಈ ವಿಚಾರದ ಬಗ್ಗೆ ರಾಷ್ಟ್ರಮಟ್ಟದ ನಾಯಕರ ಗಮನಕ್ಕೆ ತಂದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯಮಟ್ಟದ ನಾಯಕರಿಗೆ ಪಕ್ಷ ಸದೃಢವಾಗುವುದು ಬೇಕಾಗಿಲ್ಲ, ಪಕ್ಷದ ಹೆಸರಿನಲ್ಲಿ ತಾವು ಬೆಳೆದರೆ ಸಾಕು ಎಂಬ ಮನಸ್ಥಿತಿ ಹೊಂದಿದ್ದಾರೆ. ಪಕ್ಷದ ಒಳಗೆ ಗುಂಪುಗಾರಿಕೆ, ತಮ್ಮ ಹಿಂಬಾಲಕರ ಪ್ರಚೋದನೆ, ಪ್ರಾಮಾಣಿಕವಾಗಿ ಪಕ್ಷದಲ್ಲಿ ಕೆಲಸ ಮಾಡಿದವರಿಗೆ ಗೌರವ ನೀಡದೆ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಇಂತಹ ಬೆಳವಣಿಗೆಯಿಂದ ಕಾರ್ಯಕರ್ತರು, ಜನರು ಪಕ್ಷದ ಮೇಲಿನ ನಂಬಿಕೆ  ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಹಳಿ ತಪ್ಪಿರುವ ಪಕ್ಷವನ್ನು ಸರಿಪಡಿಸಲು ಕೇಂದ್ರ ನಾಯಕರು ಮಧ್ಯಪ್ರವೇಶ ಮಾಡಿಬೇಕು. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪಕ್ಷದ ಹೀನಾಯ ಸೋಲಿಗೆ ಕಾರಣ ಏನು ಎಂದು ಹುಡುಕಬೇಕು. ಪಕ್ಷದ ಏಳಿಗೆಗೆ ಮತ್ತು ನಾಯಕರನ್ನು ಗಟ್ಟಿಗೊಳಿಸುವ ಕೆಲಸವನ್ನು ಮುಕ್ತ ಮನಸ್ಸಿನಿಂದ ದಿಟ್ಟಹೆಜ್ಜೆ ಇಡಬೇಕು. ಇಲ್ಲದಿದ್ದರೇ ತಮಿಳುನಾಡು, ಆಂದ್ರದಲ್ಲಿ ಕಾಂಗ್ರೆಸ್‍ಗೆ ಬಂದ ಸ್ಥಿತಿಯೇ ಕರ್ನಾಟಕದಲ್ಲಿ ಆಗಲಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ತನ್ನದೆಯಾದ ಇತಿಹಾಸ ಹೊಂದಿರುವ ಪಕ್ಷವಾಗಿದ್ದು, ತನ್ನದೇ ಸಿದ್ಧಾಂತ ರೂಢಿಸಿಕೊಂಡಿದೆ. ಪಕ್ಷದ ವಿಚಾರ ಸರ್ವಕಾಲಿಕವಾಗಿದೆ. ಬದಲಾದ ತಂತ್ರಜ್ಞಾನ ಕಾಲದಲ್ಲಿ ಪಕ್ಷ ಪ್ರಚಾರ ವೈಖರಿ ಮತ್ತು ಸತ್ವವನ್ನು ಹೆಚ್ಚಿಸಿಕೊಂಡು ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಬಲಗೊಳಿಸಲು ಕೇಂದ್ರ ನಾಯಕರು ಚಿಂತನೆ ನಡೆಸಬೇಕು ಹಾಗೂ ರಾಜ್ಯ ಮುಖಂಡರ ತಮ್ಮ ಹಿತಾಸಕ್ತಿಗೆ ಪಕ್ಷ ಬಳಸಿಕೊಳ್ಳುತ್ತಿರುವುದಕ್ಕೆ ಬ್ರೆಕ್ ಹಾಕಬೇಕೆಂದು ಒತ್ತಾಯಿಸಿದರು.

ಸಮ್ಮಿಶ್ರ ಸರಕಾರ ರಚಿಸುವುದು ತಪ್ಪಲ್ಲ, ಆದರೆ ರಾಜ್ಯ ಸರಕಾರದ ಮೇಲೆ ಜನರಿಗೆ ನಂಬಿಕೆಯಿಲ್ಲ. ಅಧಿಕಾರ ದುರ್ಬಳಕೆ, ಕಚ್ಚಾಟ, ಅತೃಪ್ತರಿಗೆ ಪ್ರಚೋದನೆ ನೀಡುತ್ತಿರುವುದರಿಂದ ಜನರಲ್ಲಿ ತೀರಸ್ಕಾರದ ಭಾವನೆ ಬಂದಿದೆ. ಇದರ ಪರಿಣಾಮ ಪಕ್ಷಕ್ಕೆ ಭಾರೀ ಪೆಟ್ಟು ಬಿದ್ದಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಪಕ್ಷದ ಚಿಹ್ನೆಯಿಂದ ಸ್ಫರ್ಧಿಸಿ ಮತಕೇಳಲು ಹೋಗರುವುದೇ ದೊಡ್ಡ ದುರಂತ. ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಯಾವ ರೀತಿಯ ತಂತ್ರಗಾರಿಕೆ ಎಂದ ಅವರು, ಜಿಲ್ಲಾ ಮತ್ತು ರಾಜ್ಯ ಮುಖಂಡರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 15 ವರ್ಷದಿಂದ ಸಮರ್ಥ ನಾಯಕರು ಬೆಳೆಯಲು ಮುಖಂಡರು ಬಿಡುತ್ತಿಲ್ಲ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಥವಾ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ, ಜೆಡಿಎಸ್ ಪಕ್ಷದ ಚಿಹ್ನೆಯಡಿ ಸ್ಫರ್ಧಿಸಿದ್ದರಿಂದ ಕಾರ್ಯಕರ್ತರು ಅಸಹಾಯಕತೆಯಿಂದ ಮೂರು ಲಕ್ಷಕ್ಕೂ ಹೆಚ್ಚಿನ ಅಂತರ ಮತಗಳಿಂದ ಬಿಜೆಪಿ ಗೆಲುವು ಸಾಧಿಸಿತು. ಇದೆಲ್ಲ ರಾಜ್ಯ ಮುಖಂಡರಿಗೆ ಗೊತ್ತಿದೆ, ಆದರೆ ಪಕ್ಷ ಏನುಬೇಕಾದರೂ ಆಗಲಿ ಬೆಂಬಲಿಗರನ್ನು ಬೆನ್ನು ತಟ್ಟುತ್ತಾ, ಸಮರ್ಥ ನಾಯಕರನ್ನು ಮುಗಿಸುವುದೇ ಈಗಿನ ಮುಖಂಡರ ಮನಸ್ಥಿತಿಯಾಗಿದೆ ಎಂದು ಅವರು ಆರೋಪಿಸಿದರು.

ಜಿಲ್ಲೆಯಲ್ಲಿ ನಾನೆಂದೂ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿಲ್ಲ, ಕಾರ್ಯಕ್ರಮಕ್ಕೆ ಹೋದರೂ ಅವಕಾಶವೇ ನೀಡಲ್ಲ. ಇದು ನನ್ನ ಸ್ಥಿತಿ ಮಾತ್ರವಲ್ಲ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಿರಿಯ ಮುಖಂಡರನ್ನು ಕಡೆಗಣಿಸಲಾಗುತ್ತಿದೆ. ವ್ಯವಸ್ಥಿತವಾಗಿ ಅವರ ರೆಕ್ಕೆ ಮುರಿದು ಮೂಲೆ ಗುಂಪು ಮಾಡಲಾಗುತ್ತಿದೆ. 
- ಡಿ.ಕೆ. ತಾರದೇವಿ, ಮಾಜಿ ಕೇಂದ್ರ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News