×
Ad

ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾದರೆ ಉಲ್ಟಾ ಆಪರೇಷನ್ ಮಾಡುತ್ತೇವೆ: ಸತೀಶ್ ಜಾರಕಿಹೊಳಿ

Update: 2019-05-25 20:21 IST

ಬೆಳಗಾವಿ, ಮೇ 25: ಲೋಕಸಭಾ ಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಮೇ 29ರಿಂದ ಆಪರೇಷನ್ ಕಮಲ ಆರಂಭಿಸಬಹುದು ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸುಳಿವು ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಒಟ್ಟಾಗಿದ್ದು, ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ. ಒಂದು ವೇಳೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾದರೆ ನಾವು ಉಲ್ಟಾ ಆಪರೇಷನ್ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದಕ್ಕೆ ಜೆಡಿಎಸ್ ಜತೆಗಿನ ಹೊಂದಾಣಿಕೆಯ ವೈಫಲ್ಯವೆ ಕಾರಣ ಇರಬಹುದು. ಆದರೆ, ಇದೆಲ್ಲವನ್ನು ಸರಿ ಮಾಡಿಕೊಳ್ಳಲು ಇನ್ನೂ ನಾಲ್ಕು ವರ್ಷ ಸಮಯವಿದೆ. ಮುಂದಿನ ದಿನಗಳಲ್ಲಿ ಮೈತ್ರಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾಯಕರು ಚಿಂತನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್‌ನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಕಾರ್ಯಕರ್ತರೆ ನಮ್ಮ ಅಭ್ಯರ್ಥಿಗಳ ವಿರುದ್ಧವಾಗಿ ಮತ ಹಾಕಿರಬಹುದು. ಜೆಡಿಎಸ್ ನಾಯಕರು ಕೂಡ ಚುನಾವಣಾ ಸಂದರ್ಭದಲ್ಲಿ ನಮ್ಮದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸದ್ಯ, ಈ ವಿಷಯನ್ನು ಬದಿಗೊತ್ತಿ ಮುಂದಿನ ದಿನಗಳಲ್ಲಿ ಆಪರೇಷನ್ ಕಮಲಕ್ಕೆ ಅವಕಾಶ ಮಾಡಿಕೊಡದಂತೆ ನಮ್ಮ ಪ್ರಯತ್ನ ಶುರುವಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುತ್ತಾರೆ. ಸೋನಿಯಾ ಗಾಂಧಿ ಆ ಸ್ಥಾನಕ್ಕೆ ಬರುವುದಿಲ್ಲ. ರಾಜ್ಯ ಅಧ್ಯಕ್ಷ ಸ್ಥಾನದಲ್ಲೂ ಬದಲಾವಣೆ ಆಗಲ್ಲ, ದಿನೇಶ್ ಗುಂಡೂರಾವ್ ಅವರು ಮುಂದುವರಿಯುತ್ತಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ವಿಚಾರ ಬಿಡುಗಡೆಯಾಗದ ಸಿನೆಮಾ ಇದ್ದಂತೆ. ಬಹಳ ನಿರ್ದೇಶಕರು ಸಿನೆಮಾ ಮಾಡಿ ಡಬ್ಬದಲ್ಲಿಯೆ ಇಟ್ಟಿರುತ್ತಾರೆ. ಅದೇ ರೀತಿಯಲ್ಲಿ ರಮೇಶ್ ಜಾರಕಿಹೊಳಿ ಕತೆಯಾಗಿದೆ. ಒಂದು ವೇಳೆ ಅವರು ಬಿಜೆಪಿಗೆ ಹೋದರೂ ಮೈತ್ರಿಗೆ ಯಾವುದೆ ಸಮಸ್ಯೆಯಾಗುವುದಿಲ್ಲ.

-ಸತೀಶ್ ಜಾರಕಿಹೊಳಿ, ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News