ಮೈತ್ರಿ ಮುಖಂಡರ ಪುಟಗೋಸಿಯನ್ನು ರಾಜ್ಯದ ಜನತೆ ಹರಿದು ಹಾಕಿದ್ದಾರೆ: ಆರ್.ಅಶೋಕ್

Update: 2019-05-25 14:52 GMT

ಬೆಂಗಳೂರು, ಮೇ 25: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಡಗು ಶಾಸಕ ರಮೇಶ್ ಜಾರಕಿಹೊಳಿಯಿಂದ ತೂತಾಗಿದ್ದು, ಚುನಾವಣೆ ಫಲಿತಾಂಶದ ಬಳಿಕ ಸಂಪೂರ್ಣ ಮುಳುಗಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಣ ಮರ. ಅಲ್ಲಿಗೆ ನೆರಳನ್ನು ಅರಸಿ ಯಾರೂ ಹೋಗುವುದಿಲ್ಲ. ಇನ್ನು ಆ ಪಕ್ಷದ ಶಾಸಕರು ಒಣಗಿದ ಮರದ ಎಳೆಗಳಂತೆ ಉದುರುತ್ತಿದ್ದಾರೆ ಎಂದು ಆಪರೇಷನ್ ಕಮಲದ ಮುನ್ಸೂಚನೆ ನೀಡಿದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಮೈತ್ರಿ ಮುಖಂಡರ ‘ಪುಟಗೋಸಿ’ಯನ್ನು ರಾಜ್ಯದ ಜನತೆ ಹರಿದು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ಸ್ವೀಕರಿಸುವೆ ಎಂದು ಹೇಳಿದ್ದ ಸಚಿವ ರೇವಣ್ಣನವರು ನಿಂಬೆಹಣ್ಣು ಇಟ್ಟುಕೊಂಡು ಸಮಯ ನೋಡಿ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ ಅವರು, ಈ ಹಿಂದೆ ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ರಾಮಕೃಷ್ಣ ಹೆಗ್ಡೆ ರಾಜೀನಾಮೆ ನೀಡಿದ್ದರು ಎಂದು ಸ್ಮರಿಸಿದರು.

ವಿಧಾನಸಭೆಗೆ ಇಂದೇ ಚುನಾವಣೆ ನಡೆದರೆ ಬಿಜೆಪಿ 177 ಸ್ಥಾನಗಳನ್ನು ಗೆಲ್ಲಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 177 ಕ್ಷೇತ್ರಗಳಲ್ಲಿಯೂ ಅತ್ಯಂತ ಹೆಚ್ಚಿನ ಬಹುಮತ ಸಿಕ್ಕಿದೆ ಎಂದು ಅಶೋಕ್, ಮೈತ್ರಿ ಮುಖಂಡರು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಬದ್ಧರಾಗಿರಲಿ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News